ದ್ವೀಪವನ್ನೇ ನುಂಗುತ್ತಿರುವ ಮರಳು ದಂಧೆ: 50ಕ್ಕೂ ಅಧಿಕ ಕುಟುಂಬಗಳು ಆತಂಕದಲ್ಲಿ
ಮಂಗಳೂರು, ಜೂ. 24: ನೇತ್ರಾವತಿ ನದಿಯ ಭಾಗದ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದ್ವೀಪ ಪ್ರದೇಶವಾದ ಪಾವೂರು ಉಳಿಯ ಅಕ್ರಮ ಮರಳು ದಂಧೆಗೆ ಬಲಿಯಾಗುತ್ತಿರುವುದು ಮಾತ್ರವಲ್ಲ, ಈ ಪ್ರದೇಶದಲ್ಲಿ ಮೂರು ತಲೆಮಾರುಗಳಿಂದ ವಾಸವಿರುವ 50ಕ್ಕೂ ಅಧಿಕ ಕುಟುಂಬಗಳು ಭಯ, ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಇನ್‌ಫೆಂಟ್ ಜೀಜಸ್ ಚರ್ಚ್‌ನ ಧರ್ಮಗುರು ಫಾ. ಮನೋಹರ್ ಡಿಸೋಜಾ.
‘ದ್ವೀಪ ಉಳಿಸಿ, ಜನತೆಯ ಬದುಕು ರಕ್ಷಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್, ಸಮಾನ ಮನಸ್ಕ ಸಂಘಟನೆಗಳ ವೇದಿಕೆಯ ನಿಯೋಗ ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಮಾಹಿತಿಯನ್ನು ಕಲೆಹಾಕುವ ಸಂದರ್ಭ ಫಾ. ಮನೋಹರ್ ಡಿಸೋಜಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪಾವೂರು ಉಳಿಯ ದ್ವೀಪದ ಜನರನ್ನು ಜೀವಂತ ಕೊಲ್ಲುವ ಹುನ್ನಾರ ಅಕ್ರಮ ಮರಳುಗಾರಿಕೆಯಿಂದ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಇಲ್ಲಿನ ಜನರ ಜೀವಕ್ಕೆ ಅಪಾಯ ತಂದಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕೊಲೆಯ ಆರೋಪ ಹೊರಿಸಿ ಶಿಕ್ಷೆ ಆಗಬೇಕಾಗಿದೆ. ಎಷ್ಟೋ ವರ್ಷಗಳಿಂದ ಇಲ್ಲಿನ ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಫಟ್ಟವರಿಗೆ ಮನವಿ ನೀಡಲಾಗುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಇಲ್ಲಿನ ಜನರಿಗೆ ಶಾಶ್ವತ ಪರಿಹಾರ ಬೇಕು ಎಂದು ಅವರು ಆಗ್ರಹಿಸಿದರು.
ಸ್ಥಳೀಯರಾದ ಗಿಲ್ಬರ್ಟ್ ಡಿಸೋಜಾ ಮಾತನಾಡಿ, ಅಕ್ರಮ ಮರಳು ದಂಧೆಕೋರರ ಜತೆ ಹೋರಾಟ ಮಾಡಿಕೊಂಡು ಹಲವು ವರ್ಷಗಳಿಂದ ನಾವು ಜೀವನ ಸಾಗಿಸುತ್ತಾ ಬಂದಿದ್ದೇವೆ. ಸುಮಾರು 100 ಎಕರೆಯಷ್ಟಿದ್ದ ದ್ವೀಪ ಪ್ರದೇಶ ಅಕ್ರಮ ಮರಳು ದಂಧೆಯಿಂದಾಗಿ ಪ್ರಸಕ್ತ ಅರ್ಧದಷ್ಟು ನೀರು ಪಾಲಾಗಿದೆ. ಕೆಲ ವರ್ಷಗಳ ಹಿಂದೆ ಎ.ಬಿ. ಇಬ್ರಾಹೀಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಅಧಿಕಾರಿಗಳ ಜತೆ ಭೇಟಿ ನೀಡಿ, ವಳಚ್ಚಿಲ್, ಪಾವೂರು, ಗಾಡಿಗದ್ದೆ, ಸಹ್ಯಾದ್ರಿ ಕಾಲೇಜಿನ ಹಿಂಬಾಗ ಸೇರಿ ಮೂರು ಪ್ರದೇಶಗಳಲ್ಲಿ ಮರಳುಗಾರಿಕೆಯ ಧಕ್ಕೆಯನ್ನು ಬಂದ್ ಮಾಡಿ ನಿಷೇಧಾಜ್ಞೆ ಹೊರಡಿಸಿದ್ದರು. ಆ ಬಳಿಕ ಕೆಲ ವರ್ಷಗಳ ಕಾಲ ಮರಳು ದಂಧೆ ಸ್ಥಗಿತಗೊಂಡಿತ್ತು. ಮತ್ತೆ ಕೆಲ ವರ್ಷಗಳಿಂದೀಚೆಗೆ ಆರಂಭವಾಗಿದ್ದು, ಈ ನಿಷೇಧಾಜ್ಞೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮವಾಗುತ್ತಿಲ್ಲ. ಪ್ರಸಕ್ತ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಮರಳುಗಾರಿಕೆಯ ಕಾರ್ಮಿಕರು ಬೆರಳೆಣಿಕೆಯಷ್ಟಿರುವ ಜನರ ಜತೆ ಸಂಘರ್ಷ, ಬೆದರಿಕೆ ಒಡ್ಡುವ ಕಾರ್ಯ ನಡೆಸುತ್ತಿದ್ದಾರೆ. ನಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಭಯ ರಹಿತ ಜೀವನ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪಾವೂರು ಉಳಿಯ ಪ್ರದೇಶಕ್ಕೆ ಅಡ್ಯಾರು ಮೂಲಕ ದೋಣಿಯಲ್ಲಿ ಸಾಗಿದ ನಿಯೋಗವು ದೋಣಿ ಮೂಲಕ ದ್ವೀಪದ ಸುತ್ತ ವೀಕ್ಷಿಸುತ್ತಿದ್ದ ವೇಳೆ ದ್ವೀಪದ ಕಳೆದ ಕೆಲ ವರ್ಷಗಳ ಹಿಂದೆ ಇದ್ದ ದ್ವೀಪ ಪ್ರದೇಶ ಸಾಕಷ್ಟು ಭೂಭಾಗ ಮರಳುಗಾರಿಕೆಯಿಂದ ಮಾಯವಾಗಿರುವುದು ಕಂಡು ಬಂದಿದೆ. ಮಾತ್ರವಲ್ಲದೆ, ಹಾರೆಯ ಮೂಲಕ ದ್ವೀಪದ ಭಾಗವವನ್ನು ಕೊರೆದು ಮರಳು ತೆಗೆಯುತ್ತಿರುವ ಕುರುಹುಗಳೂ ಕಂಡು ಬಂದಿವೆ. ದೋಣಿಯೊಂದು ಹಗಲಲ್ಲೇ ಮರಳುಗಾರಿಕೆಗೆ ಆಗಮಿಸಿದ ದೃಶ್ಯವೂ ಮಾಧ್ಯಮ ಕ್ಯಾಮರಾಗಳಲ್ಲಿ ಸೆರೆಯಾಯಿತು. ನೇತ್ರಾವತಿ ನದಿಯ ವಳಚ್ಚಿಲ್ ಪ್ರದೇಶದ ಧಕ್ಕೆಯಲ್ಲಿ ಕ್ರೇನ್ ಮೂಲಕ ವಾಹನಗಳಿಗೆ ಮರಳು ತುಂಬಿಸುತ್ತಿರುವ ದೃಶ್ಯವೂ ಕಂಡಿ ಬಂದಿದೆ. ಮಾತ್ರವಲ್ಲದೆ ದ್ವೀಪದ ಸುತ್ತಲ್ಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಮರಳು ಸಂಗ್ರಹಿಸಿರುವುದೂ ಕಂಡು ಬಂದಿದ್ದು, ಪ್ರಾಕೃತಿಕವಾಗಿ ಸುಂದರವಾದ ತಾಣವೊಂದು ಅಕ್ರಮ ಮರಳುಗಾರಿಕೆಗೆ ನಾಶವಾಗುತ್ತಿರುವ ಬಗ್ಗೆ ನಿಯೋಗದ ಪ್ರತಿನಿಧಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ದೋಣಿಯೇ ಸಂಚಾರಕ್ಕೆ ಆಸರೆ
ಪಾವೂರು ಉಳಿಯ ಪ್ರದೇಶದ ಜನರು ನಗರದ ಸಂಪರ್ಕ ಬೆಳೆಸಬೇಕಾಗಿದರೆ, ಶಾಲಾ ಕಾಲೇಜು, ಉದ್ಯೋಗ, ಆಸ್ಪತ್ರೆಗಳಿಗೆ ತೆರಳಬೇಕಾದರೆ, ನೇತ್ರಾವತಿ ನದಿಯಲ್ಲಿ ದೋಣಿ ಮೂಲಕವೇ ಸಾಗಬೇಕು. ಮಳೆಗಾಲ ಬಂತೆಂದರೆ ಇಲ್ಲಿಯ ಜನರ ಸಂಚಾರ ವ್ಯವಸ್ಥೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಸದ್ಯ ಸ್ಥಳೀಯರನ್ನು ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ದ್ವೀಪದಿಂದ ಅಡ್ಯಾರು ದಡಕ್ಕೆ ಸಾಗಿಸಲು ಒಂದು ಮೋಟಾರೀಕೃತ ದೋಣಿ ಹಾಗೂ 2 ಸಾಮಾನ್ಯ ಹಾಯಿ ದೋಣಿಗಳಿವೆ. ದೋಣಿಯಲ್ಲಿ ಆಗಮನ ಹಾಗೂ ನಿರ್ಗಮನದ ಸಂಚಾರಕ್ಕೆ ಒಬ್ಬರಿಗೆ 30 ರೂ. ವ್ಯಯಿಸಬೇಕಾಗುತ್ತದೆ. ಹಿಂದೆ ಬೇಸಿಗೆಯ ಸಂದರ್ಭ ನದಿ ದಾಟಲು ಮರಳಿನ ಗೋಣಿ ಚೀಲಗಳ ಸೇತುವೆಯನ್ನು ಬಳಸುತ್ತಿದ್ದ ಸ್ಥಳೀಯರು ಕೆಲ ವರ್ಷಗಳಿಂದೀಚೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿ ಹಗ್ಗ, ಹಲಗೆ ಹಾಗೂ ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ಸಣ್ಣ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. 2019ರ ಜನವರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದರು. ಆದರೆ ಅಕ್ರಮ ಮರಳುದಂಧೆಕೋರರು ಕೆಲ ದಿನಗಳಲ್ಲೇ ಈ ಸೇತುವೆಯನ್ನು ಕಿತ್ತು ಹಾಕಿದ್ದು, ಈಬಗ್ಗೆ ದೂರು ಕೂಡಾ ನೀಡಲಾಗಿತ್ತು.
ಮರೀಚಿಕೆಯಾದ ಶಾಶ್ವತ ಸೇತುವೆಯ ಭರವಸೆ
ಪ್ರತಿ ಬಾರಿಯೂ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಭೇಟಿ ನೀಡಿ ಶಾಶ್ವತ ಸೇತುವೆಯ ಭರವಸೆ ನೀಡುತ್ತಾರೆ. ಕಳೆದ ದಶಕದಿಂದೀಚೆಗೆ ಈ ಭರವಸೆ ದೊರೆಯುತ್ತಿದೆಯೇ ಹೊರತು ಸೇತುವೆಯ ಕನಸು ನನಸಾಗಿಲ್ಲ. ಈ ಬಾರಿ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ.ಖಾದರ್ ನಮ್ಮಲ್ಲಿಗೆ ಭೇಟಿ ನೀಡಿದ್ದ ವೇಳೆ ಶಾಶ್ವತ ಸೇತುವೆಯ ಭರವಸೆಯನ್ನು ನೀಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ನಿಯೋಗದಲ್ಲಿ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರಾದ ಮಂಜುಳಾ ನಾಯಕ್, ಸ್ಟ್ಯಾನಿ ಲೋಬೋ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ವಿವಿಧ ಸಂಘಟನೆಗಳ ಪ್ರಮುಖರಾದ ಜಾನ್ ಲಸ್ರಾದೋ, ವಿನೋದ್ ಪಿಂಟೋ ತಾಕೊಡೆ, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಮುನ್ನೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ವಿಲ್ಫ್ರೆಡ್, ಟೋಬಿ ಪಿಂಟೋ, ಸ್ಟ್ಯಾನಿ ಡಿಕುನ್ನಾ, ಇನ್ನಿತರರು ಉಪಸ್ಥಿತರಿದ್ದರು.
‘ನದಿಯಲ್ಲಿ ಮರಳುಗಾರಿಕೆಯೇ ಮಾಡುವಂತಿಲ್ಲ. ಅದರಲ್ಲಿಯೂ ಮೀನುಗಾರಿಕೆಗೂ ನಿಷೇಧವಿರುವಾಗ ಮಳೆಗಾಲದಲ್ಲಿಯೂ ಈ ರೀತಿ ಪಾವೂರು ಉಳಿಯ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದು ನಿಜಕ್ಕೂ ಇದು ಪರಿಸರ ಸಮತೋಲನಕ್ಕೆ ಮಾರಕ. ಹೀಗೆ ಮುಂದುವರಿದರೆ ಒಂದೆರಡು ವರ್ಷಗಳಲ್ಲಿ ದ್ವೀಪವೇ ಮಾಯವಾಗಲಿದೆ. ಅಲ್ಲಿರುವ 50ಕ್ಕೂ ಅಧಿಕ ಕುಟುಂಬಗಳ ಪರಿಸ್ಥಿತಿ ಏನಾಗಬಹುದು? ಇಲ್ಲಿನ ಜನರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಜಿಲ್ಲಾಡಳಿತ ನೀಡಬೇಕು.’
-ಮುನೀರ್ ಕಾಟಿಪಳ್ಳ, ಸಂಚಾಲಕರು, ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ.
‘ಇಲ್ಲಿನ ಜನರ ಸಮಸ್ಯೆಯ ಬಗ್ಗೆ ತಿಳಿದು ವಿವಿಧ ಸಂಘಟನೆಗಳ ಪ್ರಮುಖರ ಜತೆ ಭೇಟಿ ನೀಡಿದಾಗ ಇಲ್ಲಿ ದ್ವೀಪದ ಮರಳನ್ನು ಹಾರೆಯಿಂದ ಅಗೆದು ಬರಿದು ಮಾಡಿರುವುದು ಕಂಡಿದ್ದೇವೆ. ಈ ರೀತಿಯ ಪ್ರಕೃತಿಯ ವಿರುದ್ಧ ದೌರ್ಜನ್ಯದ ಜತೆ ಇಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಜನರ ಕಣ್ಣೀರು ಒರೆಸುವವರು ಯಾರು ? ಎಂಬ ಆತಂಕ ನಮ್ಮನ್ನೂ ಕಾಡಿದೆ. ಇಲ್ಲಿನ ಜನರಿಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಹೋರಾಟ ಮಾಡಲಿದ್ದೇವೆ.’
-ಆಲ್ವಿನ್ ಡಿಸೋಜಾ, ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು.
‘ಈ ದ್ವೀಪದ ಸಮಸ್ಯೆ ಬಗ್ಗೆ ಹಲವರಿಂದ ಕೇಳಿದ್ದೆ. ಆದರೆ ಮೊದಲ ಬಾರಿ ಭೇಟಿ ನೀಡಿದಾಗಲೇ ಇಲ್ಲಿ ಮಾನವೀಯತೆಯ ವಿರುದ್ಧದ ಕೃತ್ಯ ನೋಡಿ ಮನಸ್ಸಿಗೆ ನೋವಾಗಿದೆ. ಹಣದಾಸೆಗೆ ನಡೆಯುತ್ತಿರುವ ಕಳ್ಳ ದಂಧೆಯಿಂದ ಇಲ್ಲಿನ ಜನರ ಬದುಕು ನೀರು ಪಾಲಾಗುವ ಆತಂಕವಿದೆ. ಪುಕಟ್ಟೆಯಾಗಿ ಸಿಗುವ ಪ್ರಕೃತಿಯ ಮರಳನ್ನು ಅಗೆದು ಸರಕಾರದ ರಾಜಧನವನ್ನೂ ವಂಚಿಸಿ ನಡೆಯುತ್ತಿರುವ ಈ ಕೃತ್ಯದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ.’
-ರಾಯ್ ಕ್ಯಾಸ್ತಲಿನೊ, ಅಧ್ಯಕ್ಷರು, ಮದರ್ ತೆರೇಸಾ ವೇದಿಕೆ.
‘ನಾನು ಮದುವೆಯಾಗಿ ಇಲ್ಲಿಗೆ ಬಂದು ಸುಮಾರು 45 ವರ್ಷಗಳೇ ಕಳೆದಿವೆ. ನನ್ನ ಪತಿಯ ಕುಟಂಬ ಇಲ್ಲಿ ಮೂರು ತಲೆಮಾರುಗಳನ್ನು ಕಂಡಿದ್ದಾರೆ. ಹಿಂದೆ ವಿಶಾಲವಾಗಿದ್ದ ದ್ವೀಪ ಕಳೆದ ಕೆಲ ವರ್ಷಗಳಿಂದ ಸಣ್ಣದಾಗುತ್ತಾ ಬಂದಿದೆ. ಮಾತ್ರವಲ್ಲದೆ, ಈಗ ಕುಟುಂಬಗಳು ಜೀವ ಭಯದೊಂದಿಗೆ ಕಾಲ ಕಳೆಯುವಂತಾಗಿದೆ.’
-ಹೆಲೆನ್ ಡಿಸೋಜಾ, ಸ್ಥಳೀಯ ನಿವಾಸಿ.