ಸುಳ್ಯ: ಅರಂತೋಡು ಗ್ರಾಮ ಕರಣಿಕ ಲೋಕಾಯುಕ್ತ ಬಲೆಗೆ

Update: 2023-08-19 10:38 GMT

ಸುಳ್ಯ, ಆ.19: ಹಕ್ಕು ಖುಲಾಸೆಗೆ ಅರ್ಜಿ ವಿಲೇವಾರಿ ಮಾಡಲು ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಕರಣಿಕ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಸುಳ್ಯದಲ್ಲಿ ಶನಿವಾರ ನಡೆದಿದೆ.

ಅರಂತೋಡು ಗ್ರಾಮ ಕರಣಿಕ ಮಿಯಾಸಾಬ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಹರಿಪ್ರಸಾದ್ ಎಂಬವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿ ಮಾಡಲು ಗ್ರಾಮ ಕರಣಿಕ ಮಿಯಾ ಸಾಬ್ 8 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಅದರಂತೆ ಈ ಮೊದಲು 3 ಸಾವಿರ ರೂ. ಹರಿಪ್ರಸಾದ್ ಅವರಿಂದ ಮಿಯಾಸಾಬ್ ಪಡೆದುಕೊಂಡಿದ್ದರು. ಉಳಿದ 5 ಸಾವಿರ ರೂ.ನ್ನು ಶನಿವಾರ ಸುಳ್ಯ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಹರಿಪ್ರಸಾದ್ ಅವರಿಂದ ಸ್ವೀಕರಿಸುವ ವೇಳೆ ಮಿಯಾಸಾಬ್ ರೆಡ್ ಹ್ಯಾಂಡಾಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು, ಟ್ರ್ಯಾಕ್ ಲೇಯಿಂಗ್ ಆಫೀಸರ್ ಅಮಾರುಲ್ಲಾ ಸೇರಿದಂತೆ ಮತ್ತಿತರ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಗ್ರಾಮ ಕರಣಿಕ ಲಂಚದ ಬೇಡಿಕೆಯಿರಿಸಿರುವ ಬಗ್ಗೆ ಹರಿಪ್ರಸಾದ್ ಎರಡು ದಿನಗಳ ಹಿಂದೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿರುವ ಕರಣಿಕನನ್ನು ಬಂಧಿಸಿದ್ದಾರೆ. ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ ನಡೆಸಿ, ಬಂಧಿತ ಗ್ರಾಮಕರಣಿಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News