ಡಾ.ಭರತ್ ಶೆಟ್ಟಿಯ ಹೇಳಿಕೆಯಿಂದ ಅವರ ಸಂಸ್ಕೃತಿಯ ಅರಿವು: ಪದ್ಮರಾಜ್ ಟೀಕೆ

Update: 2024-07-09 08:44 GMT

ಪದ್ಮರಾಜ್

ಮಂಗಳೂರು, ಜು.9: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿಯವರ ಹೇಳಿಕೆ ಅವರ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟನೆಯ ಮೂಲಕ ಡಾ.ಭರತ್ ಶೆಟ್ಟಿ ಹೇಳಿಕೆಯನ್ನು ಖಂಡಿಸಿರುವ ಪದ್ಮರಾಜ್, ಅವರು ಮಾತಾಡುವಾಗ ತಾನೊಬ್ಬ ಸುಶಿಕ್ಷಿತ, ವೈದ್ಯ, ಶಾಸಕನಾಗಿದ್ದೇನೆ ಎಂಬುದಕ್ಕಾದರೂ ಬೆಲೆ ಕೊಡಬೇಕಿತ್ತು. ಹಿಂದು ಸಮಾಜದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿ ಸಂವಿಧಾನದ ಹುದ್ದೆಗಾದರೂ ಗೌರವ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಪ್ರತಿಭಟನೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ ಕೂಡಾ ಭಾಗಿಯಾಗಿದ್ದರು. ನಿಮಗೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಕ್ಕಿಂತ, ರಾಹುಲ್ ಗಾಂಧಿ ಏನು ಮಾತನಾಡಿದ್ದಾರೆ, ಆ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸುವ ಅವಕಾಶ ಇದೆ. ಅಲ್ಲಿ ಈ ವಿಚಾರದ ಬಗ್ಗೆ ಮಾತಾಡಲಿ. ಅದು ಬಿಟ್ಟು ರಸ್ತೆಯಲ್ಲಿ ನಿಂತು ಪ್ರತಿಭಟಿಸುವುದಲ್ಲ ಎಂದವರು ಹೇಳಿದರು.

ಪ್ರತಿಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಸದನದಲ್ಲಿ ಮಾತನಾಡಿರುವುದನ್ನು ಹಿಂದು ಸಮಾಜ ಸೇರಿ ಸ್ವಾಮೀಜಿ ಸ್ವಾಗತಿಸಿದ್ದಾರೆ. ರಾಹುಲ್ ಗಾಂಧಿ ಹಿಂದೂ ಸಮಾಜವನ್ನು ಎಂದೂ ದೂಷಣೆ ಮಾಡಿಲ್ಲ. ಹಿಂದು ಸಮಾಜದ ಹೆಸರು ಹೇಳಿಕೊಂಡು ದ್ವೇಷಕಾರುತ್ತಿರುವ ಬಿಜೆಪಿ, ಆರೆಸ್ಸೆಸ್ ನ ದ್ವೇಷದ ರಾಜಕಾರಣವನ್ನು ವಿರೋಧಿಸಿದ್ದಾರೆ ಎಂಬುದು ಸಮಸ್ತ ಭಾರತೀಯರಿಗೆ ತಿಳಿದಿದೆ. ಅದನ್ನು ಶಾಸಕರು ವಿಷಯಾಂತರ ಮಾಡಿ ಮತ್ತೆ ದ್ವೇಷ ಬಿತ್ತುವುದನ್ನು ಶಾಸಕರು ಕೈಬಿಟ್ಟು ಕೂಡಲೇ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಪದ್ಮರಾಜ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News