'ಮಿರಾಕಲ್ ಬೇಬಿ'ಗೆ ಶಕ್ತಿ ತುಂಬಿದ ಲೇಡಿಗೋಶನ್!
ಮಂಗಳೂರು: ದಿನವೊಂದಕ್ಕೆ 20, ತಿಂಗಳೊಂದಕ್ಕೆ 600ಕ್ಕೂ ಅಧಿಕ ಹೆರಿಗೆಗಳ ಮೂಲಕ ದ.ಕ. ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಹಲವು ಜಿಲ್ಲೆ, ರಾಜ್ಯಗಳ ಬಡಜನರ ಹೆರಿಗೆ ಆಸ್ಪತ್ರೆಯಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯು ಅತ್ಯಲ್ಪ ತೂಕದೊಂದಿಗೆ ಜನಿಸಿದ ಮಗುವೊಂದರ ತೂಕ ಹೆಚ್ಚಿಸಿ ಪ್ರಾಣ ರಕ್ಷಿಸಿದೆ.
ಒಂದು ಕೆಜಿಗಿಂತ ಕಡಿಮೆ ತೂಕದೊಂದಿಗೆ ಜನಿಸುವ ಶಿಶುಗಳ ಜೀವರಕ್ಷಣೆ ವೆದ್ಯರ ಪಾಲಿಗೆ ಸವಾಲಿನದ್ದಾಗಿರುತ್ತದೆ. ಅಂತಹದರಲ್ಲಿ ಲೇಡಿಗೋಶನ್ ಆಸ್ಪತ್ರೆಯಲ್ಲಿ 780 ಗ್ರಾಂ ತೂಕದೊಂದಿಗೆ ಜನಿಸಿದ್ದ ಶಿಶುವಿಗೆ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕ(ಎನ್ಐಸಿಯು)ದಲ್ಲಿ ಚಿಕಿತ್ಸೆ ನೀಡಿ, ಶಿಶುವಿನ ತೂಕವನ್ನು 1.550 ಕೆಜಿಗೆ ಹೆಚ್ಚಿಸಿ ಸಂರಕ್ಷಣೆ ಮಾಡಿದ್ದಾರೆ.
‘‘ಸಾಮಾನ್ಯವಾಗಿ ಗರ್ಭಾವಸ್ಥೆಯ 38ರಿಂದ 42 ವಾರಗಳಲ್ಲಿ ಹೆರಿಗೆಯಾಗುತ್ತದೆ. ಆದರೆ ಬೆಳ್ತಂಗಡಿ ತಾಲೂಕಿನ ಗರ್ಭಿಣಿ 31 ವಾರಗಳ ಗರ್ಭಾವಸ್ಥೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದು, ಜೂನ್ 19ರಂದು 780 ಗ್ರಾಂ ತೂಕದ ಶಿಶುವಿಗೆ ಜನ್ಮ ನೀಡಿದ್ದರು. ಅವಧಿಪೂರ್ವ ಜನನ ಮಾತ್ರವಲ್ಲದೆ, ತೂಕವೂ ಅತ್ಯಲ್ಪವಾಗಿದ್ದ ಕಾರಣ ಮಗುವನ್ನು ಅತ್ಯಾಪ್ತತೆಯಿಂದ ನಿಗಾ ವಹಿಸ
ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ಎರಡು ವಾರಗಳ ಕಾಲ ಮಗುವನ್ನು ವೆಂಟಿಲೇಟರ್ನಲ್ಲಿಟ್ಟು ನಿಗಾ ವಹಿಸಿ, ಸಿಪ್ಯಾಪ್ ವ್ಯವಸ್ಥೆಯಡಿ ಇರಿಸಿ, ಬಳಿಕ ಆಕ್ಸಿಜನ್ ಹುಡ್ನಲ್ಲಿರಿಸಿ ಬಳಿಕ ನಿಧಾನವಾಗಿ ಹಾಲು ಉಣಿಸುವ ಮೂಲಕ ಮಗುವಿನ ತೂಕ ಹೆಚ್ಚಿಸಲು ಕ್ರಮ ವಹಿಸಲಾಯಿತು’’ ಎನ್ನುತ್ತಾರೆ ಲೇಡಿಗೋಶನ್ ಆಸ್ಪತ್ರೆಯ ಎನ್ಐಸಿಯು ಉಸ್ತುವಾರಿ, ನವಜಾತ ಶಿಶುತಜ್ಞೆ ಡಾ.ಲಕ್ಷ್ಮೀ ಕಾಮತ್.
‘‘ಹೆರಿಗೆ ಸಂದರ್ಭ ಅವಧಿ ಪೂರ್ವವಾಗಿ ಜನಿಸುವ ಶಿಶುಗಳ ಎಲ್ಲಾ ಅಂಗಾಂಗ, ಅವಯವಗಳೂ ಸಮರ್ಪಕ ವಾಗಿ ಬೆಳವಣಿಗೆ ಆಗಿರುವುದಿಲ್ಲ. ಶಿಶುವಿನ ಹೃದಯ, ಮೆದುಳು, ಹೊಟ್ಟೆ, ಕಣ್ಣು, ಕಿವಿ ಮೊದಲಾದ ಎಲ್ಲಾ ಅಂಗಾಂಗಗಳೂ ಬೆಳವಣಿಗೆ ಆಗಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಲೇಡಿಗೋಶನ್ ಇತಿಹಾಸದಲ್ಲಿ 780 ಗ್ರಾಂ ತೂಕದ ಶಿಶುವಿನ ಪ್ರಾಣ ರಕ್ಷಣೆ ಇದೇ ಮೊದಲು ಅನ್ನಿಸುತ್ತಿದೆ’’ ಎಂದು ಡಾ.ಲಕ್ಷ್ಮೀ ಕಾಮತ್ ತಿಳಿಸಿದ್ದಾರೆ.
ತೂಕ ಹೆಚ್ಚಿಸಿಕೊಂಡ ಬಳಿಕ ಶಿಶು ಆರೋಗ್ಯ ಪೂರ್ಣವಾಗಿದ್ದು, ಅದರ ಸುರಕ್ಷತೆಯನ್ನು ಕಾಪಾಡುವ ಭರವಸೆಯನ್ನು ಪೋಷಕರು ನೀಡಿದ ಹಿನ್ನೆಲೆಯಲ್ಲಿ ಮಗುವನ್ನು ಡಿಸ್ಚಾರ್ಜ್ ಮಾಡಿ ತಾಯಿಯ ಮಡಿಲಿಗೆ ನೀಡಲಾಗಿದೆ.
ಲೇಡಿಗೋಶನ್ ಆಸ್ಪತ್ರೆಯ ಸುಸಜ್ಜಿತ ಎನ್ಐಸಿಯು ಶಿಶುಗಳ ನಿಗಾದ 20 ಬೆಡ್ಗಳನ್ನು ಹೊಂದಿವೆ. ಈ ಎನ್ಐಸಿಯುಗೆ ಸಾಮಾನ್ಯ ಪ್ರವೇಶವೂ ನಿರ್ಬಂಧವಾಗಿದ್ದು,
ಉಸಿರಾಟ, ಕಡಿಮೆ ತೂಕ ಸೇರಿದಂತೆ ಜನನದ ವೇಳೆ ನಾನಾ ರೀತಿಯ ತೊಂದರೆಗಳನ್ನು ಒಳಗೊಂಡ ಶಿಶುಗಳನ್ನು ಈ ನಿಗಾ ಘಟಕದಲ್ಲಿಟ್ಟು ತಜ್ಞ ವೈದ್ಯರು ಹಾಗೂ ದಾದಿಯರಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ.
‘ಲೇಡಿಗೋಶನ್ನಲ್ಲಿ ಇಷ್ಟು ಕಡಿಮೆ ತೂಕದ ಶಿಶುವಿನ ಜನನ ಇದೇ ಮೊದಲು ನಾನು ನೋಡಿರುವಂತಹದ್ದು. ಅವಧಿಪೂರ್ವ ಜನನದ ವೇಳೆ ಶಿಶುವಿನ ಶ್ವಾಸಕೋಶ ಬೆಳವಣಿಗೆ ಆಗಿರುವುದಿಲ್ಲ. ಬಹುತೇಕವಾಗಿ ಮೆದುಳಿನಲ್ಲೂ ರಕ್ತಸ್ರಾವವಿರುತ್ತದೆ. ಹೊಟ್ಟೆ ಯಲ್ಲೂ ರಕ್ತಸ್ರಾವದ ಜತೆಗೆ ರೋಗ ನಿರೋಧಕ ಶಕ್ತಿಯೇ ಇರುವುದಿಲ್ಲ. ಅದಲ್ಲದೆ ಶಿಶುವಿನ ದೇಹದಲ್ಲಿ ಶುಗರ್ ಲೆವೆಲ್, ಕ್ಯಾಲ್ಸಿಯಂ ಅತ್ಯಂತ ಕಡಿಮೆಯಾಗಿರುತ್ತದೆ. ಆ ಸಂದರ್ಭದಲ್ಲಿ ಬಹಳಷ್ಟು ಜಾಗರೂಕತೆ ಮಾತ್ರವಲ್ಲದೆ, ಸೂಕ್ಷ್ಮತೆಯಿಂದ ಶಿಶುವನ್ನು ಎನ್ಐಸಿಯುನಲ್ಲಿರಿಸಿ ಚಿಕಿತ್ಸೆ ಒದಗಿಸಬೇಕಾಗಿರುತ್ತದೆ. ಆ ಕಾರ್ಯವನ್ನು ನಮ್ಮ ಎನ್ಐಸಿಯು ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ಸೇರಿ ಸಮರ್ಪಕವಾಗಿ ನಿರ್ವಹಿಸಿದ್ದಾರೆ.ಆ ಕಾರಣದಿಂದ ಮಗು ಎರಡು ತಿಂಗಳ ಅವಧಿಯಲ್ಲಿ 1.550 ಕೆಜಿ ತೂಕವನ್ನು ಹೊಂದಲು ಸಾಧ್ಯವಾಯಿತು.’
- ಡಾ.ಬಾಲಕೃಷ್ಣ ರಾವ್ ಎನ್.ಎಸ್., ಹಿರಿಯ ಮಕ್ಕಳ ತಜ್ಞ, ಲೇಡಿಗೋಶನ್ ಆಸ್ಪತ್ರೆ.
‘ಕಡಿಮೆ ತೂಕ ಅಥವಾ ಯಾವುದೇ ಸಮಸ್ಯೆಗಳಿಂದ ಚಿಕಿತ್ಸೆ ಪಡೆದು ಬಿಡುಗಡೆಯಾಗುವ ಶಿಶುಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಆಸ್ಪತ್ರೆ ನಿಭಾಯಿಸುತ್ತದೆ. ಪ್ರತೀ ಮಂಗಳವಾರ ಇಂತಹ ಸಮಸ್ಯೆಗಳ ಶಿಶುಗಳನ್ನು ಅವರ ಪೋಷಕರಿಗೆ ಕರೆ ಮಾಡಿ ಕರೆಸಿಕೊಂಡು ಮಗುವಿನಲ್ಲಾದ ಬೆಳವಣಿಗೆಯನ್ನು ಗಮನಿಸಲಾಗುತ್ತದೆ.’
- ಡಾ.ದುರ್ಗಾಪ್ರಸಾದ್, ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ.