ಕಾರು ಢಿಕ್ಕಿ; ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ರಿಗೆ ಗಾಯ

Update: 2024-01-14 13:36 GMT

ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರೊಂದು ಢಿಕ್ಕಿಹೊಡೆದು ಪರಾರಿಯಾಗಿರುವ ಘಟನೆ ರವಿವಾರ ಮಧ್ಯಾಹ್ನ ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಶಾಸಕ ರಾಜೇಶ್ ನಾಯ್ಕ್ ಅವರಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ಅವರು ಮಕರ ಸಂಕ್ರಮಣದ ಅಂಗವಾಗಿ ತೆಂಕಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಧ್ಯಾಹ್ನ 1:30ರ ಹೊತ್ತಿಗೆ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಶಾಸಕರು ಕೆಳಗೆ ಬಿದ್ದು ಅವರ ಕಾಲುಗಳಿಗೆ ಗಾಯವಾಗಿದ್ದು, ಕೂಡಲೇ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಢಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಪೊಲೀಸರು ಕಾರ್ಯಚರಣೆ ನಡೆಸಿ ಗುರುಪುರದಲ್ಲಿ ಪತ್ತೆ ಹಚ್ಚಿ ಚಾಲಕನ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪ್ರತ್ಯಕ್ಷದರ್ಶಿ ಪವನ್ ಕುಮಾರ್ ಎಂಬವರು ನೀಡಿರುವ ದೂರಿನಂತೆ ಕಾರು ಚಾಲಕನ ವಿರುದ್ಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News