ಬಿಜೆಪಿ ದ್ವೇಷ ಬಿತ್ತಿದ ಜಾಗದಲ್ಲಿ ಕಾಂಗ್ರೆಸ್ ನಿಂದ ಪ್ರೀತಿಯ ಬೆಳೆ: ಸುಧೀರ್ ಮುರೊಳ್ಳಿ
ಮಂಗಳೂರು, ಜು.31: ಬಿಜೆಪಿಯವರ ಓಟಿನ ರಾಜಕೀಯಕ್ಕಾಗಿ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹೀನ ಕೃತ್ಯಗಳು ದೇಶದಲ್ಲಿ ಹಿಂಸೆ, ದ್ವೇಷಕ್ಕೆ ಸಾಕ್ಷಿಯಾಗುತ್ತಿವೆ. ಆದ್ದರಿಂದ ಬಿಜೆಪಿಯವರು ದ್ವೇಷ ಬಿತ್ತಿದ ಜಾಗದಲ್ಲಿ ಕಾಂಗ್ರೆಸ್ ನಿಂದ ಪ್ರೀತಿಯ ಬೆಳೆಯನ್ನು ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಮರೋಳಿ ಹೇಳಿದ್ದಾರೆ.
ಮಣಿಪುರ ಹಿಂಸಾಚಾರವನ್ನು ಖಂಡಿಸಿ ನಗರದ ಲಾಲ್ ಬಾಗ್ ನ ಗಾಂಧಿ ಪ್ರತಿಮೆ ಎದುರು ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ಮೋದಿ ಯಾವುದೇ ಕಾರಣಕ್ಕೂ ಮಣಿಪುರ ಹಿಂಸಾಚಾರವನ್ನು ತಪ್ಪು ಎಂದು ಖಂಡಿಸಲಿಲ್ಲ ಮೋದಿಯವ ರಾಜಕಾರಣ ದ್ವೇಷ, ಸಂವಿಧಾನ ವಿರೋಧಿ ನಡವಳಿಕೆ, ಒಡೆದು ಆಳುವ ಬ್ರಿಟಿಷರ ಚಿಂತನೆಯ ಆಧಾರದ್ದಾಗಿದ್ದು, ಇಂತಹ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಲು ಇರುವುದು ಸಂವಿಧಾನ ಮಾತ್ರ. ಭಾರತದ ನೆಲದಲ್ಲಿ ಮೋದಿ ಸಾಕು, ಗಾಂಧಿ ಭಾರತ ಬೇಕಾಗಿದೆ ಎಂದು ಅವರು ಹೇಳಿದರು.
'ಇಂಡಿಯಾ' ನಿಯೋಗ ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ರಾಜ್ಯಪಾಲೆ ಅವರು ಮಣಿಪುರಕ್ಕೆ ಸರ್ವ ಪಕ್ಷ ನಿಯೋಗ ಬರಬೇಕು. ಮಣಿಪುರದ ಸಮಸ್ಯೆ ನೀಗಬೇಕು ಎಂದು ಹೇಳಿರುವುದು ಭಾರತದ ಹೆಣ್ಣಿನ ಮನಸ್ಥಿತಿಯಾಗಿದ್ದು, ಇಂತಹ ಮನಸ್ಥಿತಿ ಇದ್ದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸುಧೀರ್ ಹೇಳಿದರು.
ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ದೌಜನ್ಯ ಆಗುತ್ತದೋ, ಯಾವಾಗ ಆಳುವ ಸರಕಾರ ಈ ವ್ಯವಸ್ಥೆಗಳನ್ನು ಮೌನ ವಹಿಸುತ್ತದೋ ಆವಾಗ ಆಳ್ವಿಕೆ ಮಾಡುವರದ್ದು ರಾಕ್ಷಸಿ ಪ್ರವೃತ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರ ವಿರುದ್ಧ ಧ್ವನಿ ಎತ್ತಬೇಕು ಎಂದವರು ಹೇಳಿದರು.
ವಿಧಾನಸಭೆಯಲ್ಲಿ ಇತ್ತೀಚೆಗೆ ಕಲಾಪದ ವೇಳೆ ಬಿಲ್ಗಳನ್ನು ಹರಿದು ಉಪಸಭಾಪತಿಯ ಮೇಲೆಸೆದು ಅನಾಗರಿಕ ವರ್ತನೆ ತೋರಿದ ಶಾಸಕರಲ್ಲಿ ಹೆಚ್ಚಿನವರು ಅವಿಭಜಿತ ದ.ಕ. ಜಿಲ್ಲೆಯವರು ಎಂಬುದು ನಾಚಿಕೆಗೇಡಿನ ವಿಚಾರ ಎಂದ ಅವರು, ಇಲ್ಲಿನ ಶಾಸಕರು ಪದೇ ಪದೇ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸುತ್ತಿದ್ದು, ಇಲ್ಲಿನ ಬಿಜೆಪಿ ನಾಯಕರ ರಾಜಕಾರಣ ನಡೆಯಬೇಕಾದರೆ ಜಿಲ್ಲೆಯನ್ನು ಅವಿದ್ಯಾವಂತರ ಜಿಲ್ಲೆಯನ್ನಾಗಿಸಿ ಶಿಲಾಯುಗಕ್ಕೆ ಕೊಂಡೊಯ್ಯುವುದು ಅವರ ಪ್ರಯತ್ನವಾಗಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ನದ್ದು ಕುದ್ಮುಲ್ ರಂಗರಾವ್, ಹಾಜಬ್ಬರ ಪ್ರಯತ್ನವಾಗಬೇಕು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕೇಂದ್ರದಲ್ಲಿ ನಿರ್ಜೀವ ಸರಕಾರವಿದ್ದು, ಸಣ್ಣ ರಾಜ್ಯವೊಂದರಲ್ಲಿ ಆಗುತ್ತಿರುವ ಗಲಭೆಯನ್ನು ನಿಯಂತ್ರಿಸಲಾಗದೆ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರಾದ ಮಮತಾ ಗಟ್ಟಿ, ಕವಿತಾ ಸನಿಲ್ ಮೊದಲಾದವರು ಮಾತನಾಡಿ ಮಣಿಪುರ ಘಟನೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶ್ ಬಳ್ಳಾಲ್, ಮಿಥುನ್ ರೈ, ಶಶಿಧರ ಹೆಗ್ಡೆ, ಪದ್ಮರಾಜ್ ಆರ್., ಆರ್.ಕೆ. ಪೃಥ್ವಿರಾಜ್, ಲುಕ್ಮಾನ್ ಬಂಟ್ವಾಳ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ನವೀನ್ ಡಿಸೋಜ, ಸುರೇಂದ್ರ ಕಾಂಬ್ಳಿ, ಬೇಬಿ ಕುಂದರ್, ಪರುಷೋತ್ತಮ ಚಿತ್ರಾಪುರ, ವಿಶ್ವಾಸ್ ದಾಸ್, ಜೋಕಿಂ ಡಿಸೋಜ, ಲಾರೆನ್ಸ್ ಡಿಸೋಜ, ಮೋಹನ್ ಗೌಡ, ಸುಹಾನ್ ಆಳ್ವ, ಶೇಖರ್ ಕುಕ್ಕೇಡಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮನಪಾ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.