ವಾರ್ಷಿಕ 24,000 ರೂ. ಪ್ರೋತ್ಸಾಹ ಧನಕ್ಕೆ ಒತ್ತಾಯ

ಮಂಗಳೂರು : ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ವಾರ್ಷಿಕ 7,000 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಇದನ್ನು 24,000 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಮಿನಿ ವಿಧಾನ ಸೌಧದ ಎದುರು ಜಿಲ್ಲೆಯ ಬಿಎಲ್‌ಒಗಳು ಪ್ರತಿಭಟನೆ ನಡೆಸಿದರು.
ಚುನಾವಣಾ ಸಭೆಗಳ ಸಂದರ್ಭ ಯಾವುದೇ ಪ್ರಯಾಣ ಭತ್ತೆಯನ್ನೂ ಒದಗಿಸಲಾಗುತ್ತಿಲ್ಲ. ಕೆಲವೆಡೆ ಬಿಎಲ್‌ಒಗಳನ್ನು ಸಾಕಷ್ಟು ಶೋಷಣೆ ನೀಡಿ ದುಡಿಸಲಾಗುತ್ತಿದೆ ಎಂದು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಘಟನಾ ಸಲಹೆಗಾರರಾದ ಲತಾ ಅಂಬೆಕಲ್ಲು ಆಕ್ಷೇಪಿಸಿದರು.
ಅನೇಕ ಬಿಎಲ್‌ಒಗಳು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತಹವರನ್ನು ಚುನಾವಣಾ ಕರ್ತವ್ಯದಿಂದ ಕೈಬಿಡಬೇಕು. ಬಿಎಲ್‌ಒಗಳಿಗೆ ಆರೋಗ್ಯ ವಿಮೆ ನೀಡಬೇಕು ಎಂದು ಪುತ್ತೂರು ಘಟಕದ ಅಧ್ಯಕ್ಷೆ ತಾರಾ ಬಳ್ಳಾಲ್ ಆಗ್ರಹಿಸಿದರು.
ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ನಗರ ಕಾರ್ಯದರ್ಶಿ ಆಶಾಲತಾ ಎಂ.ವಿ., ಬಂಟ್ವಾಳ ಕೋಶಾಧಿಕಾರಿ ರೇಣುಕಾ ಬಂಟ್ವಾಳ, ಬೆಳ್ತಂಗಡಿ ಉಪಾದ್ಯಕ್ಷೆ ರಾಜೀವಿ, ವಿಟ್ಲ ಉಪಾಧ್ಯಕ್ಷೆ ಗುಲಾಬಿ, ಮಂಗಳೂರು ಗ್ರಾಮಾಂತರ ರಾಜ್ಯ ಪ್ರತಿನಿಧಿ ಚಂದ್ರಾವತಿ, ಬಂಟ್ವಾಳ ಘಟಕ ಅಧ್ಯಕ್ಷೆ ವಿಜಯವಾಣಿ, ಪುತ್ತೂರು ಅಧ್ಯಕ್ಷೆ ಕಮಲ ಮೊದಲಾದವರು ಉಪಸ್ಥಿತರಿದ್ದರು.
