ಧರ್ಮಸ್ಥಳ: ನೇರ್ತನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿರುವ ಕಾಡಾನೆಗಳ ಹಿಂಡು

Update: 2023-09-14 09:00 GMT

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ; ಧರ್ಮಸ್ಥಳದ ನೇರ್ತನೆ ಪ್ರದೇಶದಲ್ಲಿ ಗುರುವಾರ ಹಗಲು ಹೊತ್ತಿನಲ್ಲಿಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ನಾಗರಿಕರಲ್ಲಿ ಭಯ ಮೂಡಿಸಿದೆ.

ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳು ಈ ಗುಂಪಿನಲ್ಲಿ ಇದ್ದು ನೇರ್ತನೆ ಅರಣ್ಯದಿಂದ ಹೊರ ಬಂದು ಜನವಸತಿ ಪ್ರದೇಶಗಳ ಮೂಲಕ ಒಂದೆರಡು ಕಿ.ಮೀ ಕೃಷಿಗಳನ್ನು ನಾಶಮಾಡುತ್ತಾ ಮುಂದುವರಿದಿದೆ. ಪೊಸಳಿಕೆ ಸಮೀಪ ಕೃಷಿಯಿಲ್ಲದೆ ಕಾಡು ಬೆಳೆದಿರುವ ಖಾಸಗಿ ಜಾಗದಲ್ಲಿ ಬುಧವಾರ ಆನೆಗಳು ಕಾಣಿಸಿಕೊಂಡಿದೆ. ಅದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಈಪ್ರದೇಶದಲ್ಲಿ ಕಾಣಿಸಿಕೊಂಡು ಕೃಷಿಗೆ ವ್ಯಾಪಕವಾದ ಹಾನಿಯುಂಟು ಮಾಡುತ್ತಿದ್ದವು. ಕಾಡಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ನಡೆಸಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು ಇದೀಗ ಹಗಲು ವೇಳೆಯಲ್ಲಿಯೇ ಆನೆಗಳು ತೋಟಗಳಿಗೆ ನುಗ್ಗಲು ಆರಂಭಿಸಿದೆ.

ಕಾಡಾನೆಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸುವ ಪ್ರಯತ್ನಗಳು ಸಂಪೂರ್ಣ ವಿಫಲವಾಗುತ್ತಿದೆ. ಪಟಾಕಿ ಸದ್ದಿಗೆ ಆನೆಗಳು ಹೊಂದಿಕೊ‌ಡಿದ್ದು ಯಾವುದೇ ಭಯವಿಲ್ಲದೆ ಕೃಷಿ ಭೂಮಿಗೆ ನುಗ್ಗುತ್ತಿದೆ. ಈ ಪರಿಸರದಲ್ಲಿ ಹಲವರ ತೋಟಗಳಿಗೆ ಕಾಡಾನೆಗಳು ನುಗ್ಗಿದ್ದು ದೊಡ್ಡ ಪ್ರಮಾಣದಲ್ಲಿ ಕೃಷಿಗೆ ಹಾನಿಯುಂಟು ಮಾಡಿದೆ.

ಧರ್ಮಸ್ಥಳದ ಬಸ್ ನಿಲ್ದಾಣದ ಸಮೀಪದ ವರೆಗೂ ಕಾಡಾನೆಗಳು ಬಂದಿದ್ದವು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದು ಪೇಟೆಗೆ ಬಂದರೂ ಆಶ್ಚರ್ಯವಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.ಬುಧವಾರ ತಡ ರಾತ್ರಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು ಆದರೆ ಅದು ಯಾವುದೂ ಪ್ರಯೋಜನ ನೀಡಿಲ್ಲ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಕೃಷಿ ನಾಶಕ್ಕೆ ಪರಿಹಾರ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News