ಪ್ರಮೋದ್ ಮಧ್ವರಾಜ್ ಗೆ ಬಿಜೆಪಿ ಎಂಪಿ ಟಿಕೆಟ್ ನೀಡಲು ಮೀನುಗಾರ ಸಂಘಟನೆಗಳ ಒತ್ತಾಯ

Update: 2024-01-29 09:53 GMT

ಮಂಗಳೂರು, ಜ.29: ಮುಂದಿನ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೀನುಗಾರ ಸಮಾಜದ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಮೀನುಗಾರ ಸಂಘಟನೆಗಳು ಒತ್ತಾಯಿಸಿವೆ.

ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸೋಮವಾರ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರು ಈ ಬಗ್ಗೆ ಒತ್ತಾಯ ಮಾಡಿದ್ದಾರೆ.

ಮೀನುಗಾರರ ಮುಖಂಡರಾದ ಕಿಶೋರ್ ಡಿ.ಸುವರ್ಣ ಮಾತನಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ರಾಜ್ಯದ ಜನಸಂಖ್ಯೆಯು ಶೇ. 50ರಷ್ಟಿರುವ ಒಬಿಸಿ ಅಭ್ಯರ್ಥಿಗಳಿಗೆ ಒಂದೇ ಒಂದು ಸೀಟು ನೀಡಿಲ್ಲದಿರುವುದು ಬೇಸರದ ಸಂಗತಿ. ಕಾಂಗ್ರೆಸ್ ನಿಂದ ಕಳೆದ ಒಬಿಸಿಯಿಂದ 6 ಮಂದಿ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರರು ಮಹತ್ವದ ಸವಾಲುಗಳನ್ನು ಎದುರಿಸುತ್ತಿದ್ದು, ರಾಜಕೀಯ ವೇದಿಕೆಗಳಲ್ಲಿ ಮನ್ನಣೆ ಹಾಗೂ ಪ್ರಾತಿನಿಧ್ಯವನ್ನು ಪಡೆಯಲು ದೀರ್ಘ ಕಾಲ ಹೋರಾಡುತ್ತಿದ್ದಾರೆ. ಮೀನುಗಾರರ ಸವಾಲು ಹಾಗೂ

ರಾಜಕೀಯ ವೇದಿಕೆಗಳಲ್ಲಿ ಮೀನುಗಾರರ ಸದುದ್ದೇಶವನ್ನು ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ

ಮೀನುಗಾರರ ಪ್ರತಿನಿಧಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ಪ್ರಮೋದ್ ಮಧ್ವರಾಜ್ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಗಮನಾರ್ಹ ವ್ಯಕ್ತಿಯಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಭ್ರಷ್ಟಾಚಾರ, ಕಳಂಕ ರಹಿತ ಪರಿಶುದ್ಧ ರಾಜಕಾರಣಿಯಾಗಿ ಅವರು ಮಾಡಿದ ಕಾರ್ಯಕ್ಕೆ 2018ರ ಅವಧಿಯಲ್ಲಿ ರಾಜ್ಯದ

224 ಶಾಸಕರ ಪೈಕಿ ನಂ. 1 ಶಾಸಕರಾಗಿ ವಿಶ್ವ ದರ್ಜೆಯ ಶ್ರೇಷ್ಟ ಮಾಧ್ಯಮ ಸಮೂಹ ಟೈಮ್ಸ್ ಗ್ರೂಪ್ ಸಮೀಕ್ಷೆಯಲ್ಲಿ ಅವರು ಗುರುತಿಸಲ್ಪಟ್ಟಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ಆಗ್ರಹ ಎಂದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರರಿಗೆ ಸದುಪಯೋಗವಾಗುವಂತೆ ಮಾಡುವುದು, ರಾಜ್ಯದ 14 ಗ್ರಾಹಕ ಮೀನುಗಾರರ ಡೀಸೆಲ್ ಮಾರಾಟ ಸೊಸೈಟಿಗಳ ಸಮಸ್ಯೆ ಬಗೆಹರಿಸುವುದು, ತಮಿಳುನಾಡಿನ ಕನ್ಯಾಕುಮಾರಿಯ ಮೀನುಗಾರರು ರಾಜ್ಯದ ಬೋಟುಗಳ ಮೀನು ಮತ್ತು ಸಾಮಗ್ರಿಗಳನ್ನು ದೋಚಿ ಮಾರಣಾಂತಿಕ ಹಲ್ಲೆ ಮಾಡಿದ ಬಗ್ಗೆ ಮೀನುಗಾರರಿಗೆ ನ್ಯಾಯ ದೊರಕಿಸುವುದು, ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯದ ಮೀನುಗಾರರು ಕರ್ನಾಟಕದ ಮೀನುಗಾರರ ಮೇಲೆ ಸುಳ್ಳು ಆರೋಪ ಮಾಡಿ ಹಲ್ಲೆಗೈದು ಬೋಟುಗಳಿಗೆ ದಂಡ ಹಾಕು ಬಗ್ಗೆ ನ್ಯಾಯ ದೊರಕಿಸುವುದು, ಅಂತರ್ರಾಜ್ಯ ಮೀನುಗಾರರ ಸಮಸ್ಯೆ ಪರಿಹರಿಸಲು ಏಕರೂಪ ಕಾನೂನು ಜಾರಿಗೊಳಿಸುವುದು, ಮೀನುಗಾರಿಕೆಯನ್ನು ಆಧುನೀಕರಣಗೊಳಿಸುವುದು, ರಾಜ್ಯದ ಕಡಲ ಕಿನಾರೆ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಪ್ರಮೋದ್ ಮಧ್ವರಾಜ್ ಅವರು ಸಮರ್ಥರಾಗಿದ್ದು, ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ನಮ್ಮ ಒತ್ತಾಯವಾಗಿದೆ ಎಂದು ಕಿಶೋರ್ ಡಿ. ಸುವರ್ಣ ವಿವರಿಸಿದರು.

ಕೇವಲ ಬಿಜೆಪಿಯಿಂದ ಮಾತ್ರವೇ ಯಾಕೆ ಒಬಿಸಿ ಪರವಾಗಿ ಮೀನುಗಾರ ಮುಖಂಡರಿಗೆ ಟಿಕೆಟ್ಗಾಗಿ ಆಗ್ರಹಿಸಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯಿಂದ 9 ಮಂದಿ ಲಿಂಗಾಯಿತ, 7 ಗೌಡ, 7 ಪರಿಶಿಷ್ಟ ಜಾತಿ ಮತ್ತು ಪಂಗಡ, 3 ಬ್ರಾಹ್ಮಣ, 1 ನಾಯ್ಕ ಹಾಗೂ ಮುಂದುವರಿದ ವರ್ಗವೊಂದಕ್ಕೆ ಒಂದು ಟಿಕೆಟ್ ಹಂಚಿಕೆಯಾಗಿತ್ತು. ಆದರೆ ಮತದಾರರಲ್ಲಿ ಶೇ. 50ರಷ್ಟಿರುವ ಒಬಿಸಿ ಸಮುದಾಯಕ್ಕೆ ಟಿಕೆಟ್ ನೀಡಲಾಗಿಲ್ಲ. ವಿಶ್ವ ನಾಯಕರಾಗಿ ಗುರುತಿಸಿಕೊಂಡಿರುವ ನರೇಂದ್ರ ಮೋದಿ ಅವರ ವರ್ಚಸ್ಸಿನಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಿದರೂ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಹಾಗಾಗಿ ಈ ಬಾರಿ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ನೀಡಬೇಕು ಎಂದು ಕಿಶೋರ್ ಡಿ. ಸುವರ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಬೆಂಗ್ರೆ, ಅನಿಲ್ ಕುಮಾರ್ ಚೊಕ್ಕಬೆಟ್ಟು, ಉಮೇಶ್ ಜಿ. ಕರ್ಕೇರ, ಭರತ್ ಕುಮಾರ್ ಉಳ್ಳಾಲ, ಸದಾನಂದ ಬಂಗೇರ, ಪುಂಡಲೀಕ ಹೊಸಬೆಟ್ಟು, ರಾಜೇಶ್ ಪುತ್ರನ್ ಉಪಸ್ಥಿತರಿದ್ದರು.

 

ಉಡುಪಿ- ಚಿಕ್ಕಮಗಳೂರು ಭಾಗದಲ್ಲಿ ಈ ಹಿಂದೆ ಸದಾನಂದ ಗೌಡ, ಶೋಭಾ ಕರಂದ್ಲಾಜೆಯವರು ಸ್ಪರ್ಧಿಸಿದಾಗ ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೀನುಗಾರ ಸಮುದಾಯ ತ್ಯಾಗ ಮಾಡಿದೆ. ಹಾಲಿ ಸಂಸದೆ, ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಯಾವ ಭಾಗದಲ್ಲಿಯೂ ಸ್ಪರ್ಧಿಸಬಹುದು. ಹಾಗಾಗಿ ಅವರು ಆ ಕ್ಷೇತ್ರವನ್ನು ಮೊಗವೀರ ನಾಯಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ನೀಡಬೇಕು ಎಂಬುದು ನಮ್ಮ ಒತ್ತಾಯ. ಟಿಕೆಟ್ ದೊರೆಯದಿದ್ದರೆ ಮೊಗವೀರ ಸಮುದಾಯದ ಮುಂದಿನ ನಿಲುವನ್ನು ಸೂಕ್ತ ಸಂದರ್ಭದಲ್ಲಿ ಪ್ರಕಟಿಸಲಾಗುವುದು. ಮೀನುಗಾರರಿಗೆ ಯಾವ ಪಕ್ಷ ಅವಕಾಶ ನೀಡಿದರೂ ನಾವು ಬೆಂಬಲಿಸುತ್ತೇವೆ.

ಕಿಶೋರ್ ಡಿ. ಸುವರ್ಣ, ಮೀನುಗಾರ ಮುಖಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News