ಬಿಜೆಪಿಯವರು ಬಜೆಟ್ ಓದುವುದಿಲ್ಲ, ಎಕನಾಮಿಕ್ಸ್ ಗೊತ್ತಾಗುವುದಿಲ್ಲ : ಸಿಎಂ ಸಿದ್ದರಾಮಯ್ಯ
ಮಂಗಳೂರು : ಬಿಜೆಪಿಯವರು ಬಜೆಟ್ ಓದುವುದಿಲ್ಲ, ಎಕನಾಮಿಕ್ಸ್ ಗೊತ್ತಾಗುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ತಿಳಿಸಿದ್ದಾರೆ.
ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ನಡೆಯಲಿರುವ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರಕ್ರಿಯೆಯಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು. ಜನರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಡಾ.ಬಿ.ಆರ್ . ಅಂಬೇಡ್ಕರ್ ಹೇಳಿದ್ದರು. ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಮಾಡಿದ್ದೇವೆ ಅಂತ ಜನರಿಗೆ ತಿಳಿಸಿದ್ದೇವೆ. ಈ ಹಿಂದೆ ರಾಜ್ಯದಲ್ಲಿ ನೀರಾವರಿಗೆ 16 ಸಾವಿರ ಕೋಟಿ ರೂ. ಇತ್ತು ಈ ವರ್ಷ 18 ಸಾವಿರ ಕೋಟಿ ಇಟ್ಟಿದ್ದೇವೆ. ಈ ಬಾರಿ ಒಂದು ಲಕ್ಷದ 20 ಸಾವಿರ ಕೋಟಿ ರೂಪಾಯಿ ಬಜೆಟ್ ನಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಸೇರಿಸಿ ಅನುದಾನ ಇಟ್ಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಅಭಿವೃದ್ಧಿ ಶೂನ್ಯ ಅಂತಿದ್ದಾರೆ. ಅವರು ಬಜೆಟ್ ಓದುವುದಿಲ್ಲ. ಎಕನಾಮಿಕ್ಸ್ ಗೊತ್ತಾಗುವುದಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕವಾಗಿ ಶಕ್ತಿ ನೀಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.