ಹರೇಕಳ: ಶತಾಯುಷಿ, ಪ್ರಸೂತಿ ತಜ್ಞೆ ಅತೀಜಮ್ಮ (ತಾಉಮ್ಮಾ) ನಿಧನ

Update: 2023-09-25 05:25 GMT
Editor : Naufal | By : ಹಂಝ ಮಲಾರ್

ಮಂಗಳೂರು: ನಗರದ ಹೊರವಲಯದ ಹೆರೇಕಳ ಕಿಸಾನ್ ನಗರ ನಿವಾಸಿ ಶತಾಯುಷಿ, ಪ್ರಸೂತಿ ತಜ್ಞೆ ಅತೀಜಮ್ಮ ಅವರು ನಿಧನರಾಗಿದ್ದಾರೆ.

ಅವರಿಗೆ 107 ವರ್ಷ ವಯಸ್ಸಾಗಿತ್ತು. ಹರೇಕಳ ಗ್ರಾಮದ ಕಲ್ಲಾಯಿ ಆಲಿಯಬ್ಬ ಯಾನೆ ಹಾಜಬ್ಬ ಬ್ಯಾರಿ-ಅಲಿಮಮ್ಮ ದಂಪತಿಯ ಪುತ್ರಿಯಾಗಿರುವ ಅತೀಜಮ್ಮ 'ತಾ-ಉಮ್ಮಾ' ಎಂದೇ ಚಿರಪರಿಚಿತರಾಗಿದ್ದರು.

ತಾಉಮ್ಮಾ ಅವರು ಸಾವಿರಕ್ಕೂ ಅಧಿಕ ಮಂದಿಯ ಹೆರಿಗೆ ಮಾಡಿಸಿದ ಕೀರ್ತಿ ಹೊಂದಿದ್ದಾರೆಇಟ್ಟಿಗೆಗಾಗಿ ದೋಣಿಯಲ್ಲಿ ಮಣ್ಣು ಸಾಗಾಟದ ಕೆಲಸ ಮಾಡುತ್ತಿದ್ದ ಎಲ್ಯಾರ್ ಹುಸೈನಬ್ಬ ಅವರ ಜೊತೆ ಸಂಸಾರ ಆರಂಭಿಸಿದ ಇವರು ಮುದಲೆಮಾರು ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 1974ರಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದಿಂದ ಮನೆ ಕಳಕೊಂಡು ಕಿಸಾನ್ ನಗರಕ್ಕೆ ಸ್ಥಳಾಂತರಗೊಂಡರು.

ತನ್ನ 35ನೇ ಹರೆಯದಲ್ಲಿ ಸೂಲಗಿತ್ತಿ (ಹೆರಿಗೆ ಮಾಡಿಸುವ) ಸೇವೆಯನ್ನು ಆರಂಭಿಸಿದ ಅತೀಜಮ್ಮ ಯಾನೆ ತಾಉಮ್ಮಾ ಅವರನ್ನು ಊರಿನವರು ಮಾತ್ರವಲ್ಲ ಆಸುಪಾಸಿನ ಗ್ರಾಮದವರೂ ಕರೆದುಕೊಂಡು ಹೋಗುತ್ತಿದ್ದರು.

ಬಸ್ಸೇ ಇಲ್ಲದ ಕಾಲದಲ್ಲಿ 10-20 ಕಿ.ಮೀ.ವರೆಗೆ ನಡೆದುಕೊಂಡು ಹೋದ ದಿನಗಳನ್ನು ತಾಉಮ್ಮಾರ ಮಗಳು ಅಲಿಮಮ್ಮ ನೆನಪಿಸುತ್ತಾರೆ.

ಯಾರು ಏನೇ ಕೇಳಿದರೂ ಅತೀಜಮ್ಮ ಇಲ್ಲ ಎಂದವರಲ್ಲ. ಅದರಲ್ಲೂ ಮಕ್ಕಳೆಂದರೆ ಅತೀಜಮ್ಮರಿಗೆ ಪಂಚಪ್ರಾಣ. ತನ್ನ ಕಣ್ಣಿಗೆ ಬಿದ್ದ ಮಕ್ಕಳಿಗೆ ಏನಾದರೊಂದು ತಿನ್ನಲು ಕೊಡುತ್ತಿದ್ದರು. ಹಾಗಾಗಿ ಮಕ್ಕಳಿಗೂ ಅತೀಜಮ್ಮರಲ್ಲಿ ವಿಶೇಷ ಪ್ರೀತಿಯಿತ್ತು. ಹೀಗಾಗಿ  ಅತೀಜಮ್ಮರನ್ನು ಕಂಡ ಮಕ್ಕಳೆಲ್ಲಾ ನನಗೆ ಮೊದಲು, ನನಗೆ ಮೊದಲು ಎಂಬಂತೆ "ತಾ ಉಮ್ಮಾ, ತಾ ಉಮ್ಮಾ"(ಕೊಡಿ ಅಮ್ಮಾ) ಎಂದು ಅಂಗಲಾಚುತ್ತಿದ್ದರು. ಮುಂದಕ್ಕೆ ‘ತಾ ಉಮ್ಮಾ’ ಎಂಬುವುದು ಅವರ ಹೆಸರಾಗಿಯೇ ಬದಲಾಯಿತು. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಹಂಝ ಮಲಾರ್

contributor

Similar News