ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗಷ್ಟೇ ಕೆವೈಸಿ ಕಡ್ಡಾಯ; ವೈರಲ್ ಸುಳ್ಳು ಸುದ್ದಿ ಗೊಂದಲಕ್ಕೆ ಕಾರಣ: ಏಜೆನ್ಸಿ ಆರೋಪ
ಸುರತ್ಕಲ್, ಡಿ.20: ಇಲ್ಲಿನ ಗ್ಯಾಸ್ ಏಜೆನ್ಸಿಯೊಂದರಲ್ಲಿ ಕೆವೈಸಿ ಮಾಡಿಸಿಕೊಳ್ಳಲು ನೂರಾರು ಗ್ರಾಹಕರು ಜಮಾಯಿಸಿದ್ದು, ನೂಕುನುಗ್ಗಲಿಗೆ ಏಜೆನ್ಸಿಯವರು ಹೈರಾಣಾಗಿದ್ದಾರೆ.
ಭಾರತ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯಿಂದ 2023ರ ಅಕ್ಟೋಬರ್ 18ರಂದು ಹೊರಡಿಸಲಾಗಿದ್ದ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಕರ್ನಾಟಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ಡೇನಿಯಲ್ ವಾಸ್ ಅವರು ವಾರ್ತಾಭಾರತಿ ಜೊತೆ ಮಾತನಾಡಿ, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದುಕೊಂಡಿರುವವರಿಗೆ ಸಬ್ಸಿಡಿಯ ಹಿನ್ನೆಲೆಯಲ್ಲಿ ಎಲ್ಲರೂ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುವ ಖಾತೆಗೆ ಕೆವೈಸಿ ಮಾಡಿಸುವುದು ಕಡ್ಡಾಯ. ಉಳಿದವರು ಮಾಡಿಸಬಹುದು ಆದರೆ ಕಡ್ಡಾಯವಲ್ಲ ಎಂದು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಯಾವುದೇ ಕಂಪೆನಿಗಳ ಗ್ಯಾಸ್ ಸಂಪರ್ಕ ಪಡೆದುಕೊಂಡಿರುವ ಗ್ರಾಹಕರು ಕೆವೈಸಿ ಮಾಡಿಸಿಕೊಳ್ಳಬೇಕು. ಆದರೆ ಇಂತಿಷ್ಟೇ ದಿನಾಂಕದ ಒಳಗಾಗಿ ಮಾಡಿಕೊಳ್ಳಬೇಕೆಂಬ ನಿರ್ಬಂಧವಿಲ್ಲ. ಆದರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದುಕೊಂಡಿರುವ ಗ್ರಾಹಕರು ತಮ್ಮ ಗ್ಯಾಸ್ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಆದರೆ ಯಾರಿಗೂ ಕಾಲಮಿತಿ ಅಳವಡಿಸಿಲ್ಲ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ನ ಸೇಲ್ಸ್ ಮ್ಯಾನೇಜರ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸರಕಾರದ ಸಬ್ಸಿಡಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಉಳಿದ ಗ್ರಾಹಕರು ಕೆವೈಸಿ ಮಾಡಿಸ ಬಹುದು. ಆದರೆ, ಅವರಿಗೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ.
-ರಾಹುಲ್
ಹಿಂದುಸ್ತಾನ್ ಪೆಟ್ರೋಲಿಯಂ ನ ಸೇಲ್ಸ್ ಮ್ಯಾನೇಜರ್
ಡಿ.31ರ ಒಳಗಾಗಿ ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಬಂದ್ ಆಗುತ್ತದೆ ಎಂದೆಲ್ಲಾ ವಾಟ್ಸಾಪ್ ಗ್ರೂಪ್ ಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಇದು ಜನರ ಗೊಂದಲಗಳಿಗೆ ಕಾರಣವಾಗಿದೆ. ಕೆವೈಸಿ ಮಾಡಿಸಲು ಏಜೆನ್ಸಿಯ ಕಚೇರಿಗೇ ಬರಬೇಕೆಂದಿಲ್ಲ. ಮನೆ ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ನೀಡುವವರೂ ಕೆವೈಸಿ ಮಾಡಿಕೊಡುತ್ತಾರೆ. ಹಾಗಾಗಿ ಗ್ರಾಹಕರು ಗೊಂದಲಗಳಿಗೆ ಒಳಗಾಗಬಾರದು ಎಂದು ಸುರತ್ಕಲ್ ಶಶಿಮಂಗಳಾ ಗ್ಯಾಸ್ ಏಜೆನ್ಸಿಯ ಮಾಲಕ ಶಶಿದರ ತಂತ್ರಿ ಅವರು ಸ್ಪಷ್ಟ ಪಡೆದಿದ್ದಾರೆ.