ಮಂಗಳೂರು| ಕೊರಿಯರ್ ಮಾಡಿದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇತ್ತೆಂದು ಹೇಳಿ ಬೆದರಿಸಿ 39.30 ಲಕ್ಷ ರೂ. ವಂಚನೆ

Update: 2024-09-30 17:37 GMT

ಮಂಗಳೂರು: ಕೊರಿಯರ್ ಮಾಡಿದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇತ್ತೆಂದು ಆರೋಪಿಸಿ ವ್ಯಕ್ತಿಯನ್ನು ಬೆದರಿಸಿ 39.30ಲಕ್ಷ ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.23ರಂದು ನನಗೆ ಫೋನ್ ಕರೆ ಮಾಡಿದ ಮಹಿಳೆ ತನ್ನನ್ನು ಮುಂಬೈನ ಡಿಎಚ್‌ಎಲ್ ಕೊರಿಯರ್ ಕಚೇರಿಯ ಶ್ರೇಯ ಶರ್ಮಾ ಎಂಬುದಾಗಿ ಪರಿಚಯಿಸಿಕೊಂಡು ‘ನಿಮ್ಮ ಹೆಸರಿನಲ್ಲಿ ಚೀನಾಕ್ಕೆ ಕಳುಹಿಸಿದ ಪಾರ್ಸೆಲ್ ಬಂದಿದೆ. ಅದು ಚೀನಾಕ್ಕೆ ರವಾನೆಯಾಗದೆ ನಮ್ಮ ಕಚೇರಿಯಲ್ಲಿಯೇ ಉಳಿದಿದೆ. ಅದರಲ್ಲಿ 5 ಪಾಸ್‌ಪೋರ್ಟ್, 1 ಲ್ಯಾಪ್‌ಟಾಪ್, 400 ಗ್ರಾಂ ಎಂಡಿಎಂಎ ಡ್ರಗ್ಸ್, ಬ್ಯಾಂಕ್ ದಾಖಲೆಗಳು, ಮೂರೂವರೆ ಕೆಜಿ ಬಟ್ಟೆ ಇದೆ’ ಎಂದಿದ್ದಳು. ತಾನು ಯಾವ ಪಾರ್ಸೆಲ್ ಕೂಡಾ ಕಳುಹಿಸಿಲ್ಲ ಎಂದಿದ್ದರೂ ಆಕೆ ‘ನಿಷೇಧಿತ ಡ್ರಗ್ಸ್ ಇರುವುದರಿಂದ ನಿಮ್ಮನ್ನು ಸಂಜೆ 6 ಗಂಟೆಯ ಒಳಗೆ ಕಸ್ಟಮ್ಸ್ ಅಧಿಕಾರಿಗಳು ಅರೆಸ್ಟ್ ಮಾಡುತ್ತಾರೆ. ಸೆ.24ರ ಬೆಳಗ್ಗೆ 9ಕ್ಕೆ ವಿಚಾರಣೆಗೆ ಒಳಪಡಿಸಲಾಗುವುದು’ ಎಂದಳು. ಸೆ.24ರಂದು ಬೆಳಗ್ಗೆ 9 ಗಂಟೆಗೆ ಕರೆ ಮಾಡಿದ ಆಕೆ ವೀಡಿಯೋ ಕಾಲ್‌ನಲ್ಲಿ ವಿಚಾರಣೆಗೆ ಒಳಪಡಿಸುವಂತೆ ಮಾಡಿದ್ದು ಬಂಧನ ಮಾಡದೆ ನಿರಪರಾಧಿ ಎಂದು ಸಾಬೀತುಪಡಿಸಬೇಕಾದರೆ ಕೂಡಲೇ ಹಣವನ್ನು ವರ್ಗಾಯಿಸಬೇಕು ಎಂದು ಖಾತೆ ಸಂಖ್ಯೆಯನ್ನು ತಿಳಿಸಿದಳು.

ಹೆದರಿದ ತಾನು 37 ಲಕ್ಷ ರೂ.ಗಳನ್ನು ಆಕೆ ಹೇಳಿದ ಖಾತೆಗೆ ವರ್ಗಾಯಿಸಿದೆ. ಸೆ.26ರಂದು ಸೊತ್ತುಗಳ ವಿಚಾರಣೆಯನ್ನು ಆಡಿಟರ್ ಮಾಡುವುದಾಗಿ ನಂಬಿಸಿ ಮತ್ತೆ 2.30 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾಳೆ. ವಿಚಾರಣೆ ಮುಗಿದ ಬಳಿಕ ಸೆ.28ರಂದು ಹಣವನ್ನು ಬಡ್ಡಿ ಸಮೇತ ವಾಪಸ್ ನೀಡುವುದಾಗಿಯೂ ಹೇಳಿದ್ದಾಳೆ. ಆದರೆ ಆ ಬಳಿಕ ಕರೆ ಮಾಡಿಲ್ಲ. ಬಳಿಕ ಆಕೆಗೆ ಎಷ್ಟೇ ಕರೆ, ಮೆಸೇಜ್ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ ಎಂದು ವಂಚನೆಗೊಳಗಾದ ವ್ಯಕ್ತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News