ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ಮಂಗಳೂರು ಬಿಷಪ್, ಸ್ಪೀಕರ್ ಯು.ಟಿ. ಖಾದರ್ ಭೇಟಿ

Update: 2023-10-24 15:53 GMT

ಮಂಗಳೂರು, ಅ.24: ದಸರಾ ಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ಮಂಗಳೂರಿನ ಬಿಷಪ್ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮತ್ತು ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂದೇಶ ನೀಡಿದ ಬಿಷಪ್ ತಮ್ಮ ಸಂದೇಶದಲ್ಲಿ ಕುದ್ರೋಳಿ ದೇವಸ್ಥಾನದ ಸಂಸ್ಥಾಪಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಉಪದೇಶಗಳನ್ನು ಶ್ಲಾಘಿಸಿದರು.

ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವವನ್ನು ಸಾರಿದ ಮಹಾನ್ ಸಂತ ಶ್ರೀನಾರಾಯಣ ಗುರುಗಳ ಸಂದೇಶದಂತೆ ದೇವಾಲಯವು ಈಗ ಏಕತೆ ಮತ್ತು ಕೋಮು ಸೌಹಾರ್ದತೆಯ ತಾಣವಾಗಿದೆ ಎಂದರು.

ಮಂಗಳೂರು ದಸರಾ ಈಗ ಎಲ್ಲಾ ಧರ್ಮ ಮತ್ತು ಧರ್ಮದ ಜನರ ಹಬ್ಬವಾಗಿದೆ . ಮಂಗಳೂರು ದಸರಾ ಈಗ ವಿಶ್ವ ಪ್ರಸಿದ್ಧವಾಗಿದೆ ಮತ್ತು ಹೆಸರಾಂತ ಮೈಸೂರು ದಸರಾ ನಂತರ ಎರಡನೆಯದಾಗಿ ಗುರುತಿಸಿಕೊಂಡಿದೆ ಎಂದು ಶ್ಲಾಘಿಸಿದರು.

ಬಿಷಪ್ ಅವರೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ರಾಯ್ ಕ್ಯಾಸ್ತಲಿನೋ ಪಿಆರ್‌ಒ ರೂಪೇಶ್ ಮಾಡ್ತಾ, ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜ, ಮಿಥುನ್ ಸಿಕ್ವೇರಾ, ಸುನಿಲ್ ಕುಮಾರ್ ಬಜಾಲ್, ಸ್ಟಾನ್ಲಿ ಡಿ’ಕುನ್ಹಾ ಬಂಟ್ವಾಳ್ ಇದ್ದರು.

ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರ ಆಹ್ವಾನದ ಮೇರೆಗೆ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಬಿಷಪ್‌ರ ಭೇಟಿಯನ್ನು ಆಯೋಜಿಸಲಾಗಿತ್ತು.

ಕ್ಷೇತ್ರಕ್ಕೆ ಭೇಟಿ ನೀಡಿದ ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಮತ್ತು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು ಟಿ ಖಾದರ್ ಅವರನ್ನು ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿರಾಂ ಅವರು ಸ್ವಾಗತಿಸಿದರು .

ಆಡಳಿತ ಸಮಿತಿಯ ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ಹರಿ ಕೃಷ್ಣ ಬಂಟ್ವಾಳ, ಸೂರ್ಯಕಾಂತ ಜಯ ಸುವರ್ಣ ಮತ್ತು ಟ್ರಸ್ಟಿ ಸಂತೋಷ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News