ಮಂಗಳೂರು: ಅನಧಿಕೃತ ಕ್ಲಿನಿಕ್, ಲ್ಯಾಬ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ

Update: 2024-01-13 08:53 GMT

ಮಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖಾ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಜಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಪಿಎಂಇಎ ಕಾಯ್ದೆ-2017ರ ನೋಂದಾವಣೆಯಾಗದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆ/ ಕ್ಲಿನಿಕ್ ಲ್ಯಾಬೋರೇಟರಿಗಳನ್ನು ತನಿಖಾ ತಂಡದವರು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮೂಡುಶೆಡ್ಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಹಾಗೂ ನಗರದ ಹಂಪನಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಕ್ಲಿನಿಕ್‌ಗೆ ಬೀಗಮುದ್ರೆ ಹಾಕಿದ್ದಾರೆ.

ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕೆಪಿಎಂಇಎ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದ ಅಲೋಪತಿ ಕ್ಲಿನಿಕ್, ಆಯುಷ್‌ ಕ್ಲಿನಿಕ್, ಡೆಂಟಲ್‌ ಕ್ಲಿನಿಕ್, ಜನೆಟಿಕ್ ಲ್ಯಾಬೋರೇಟರಿಗಳು, ಫಿಸಿಯೋಥೆರಪಿ ಸೆಂಟರ್‌ಗಳು, ಲ್ಯಾಬ್, ಲ್ಯಾಬ್‌ ಕಲೆಕ್ಷನ್ ಸೆಂಟರ್‌ಗಳು ಇತ್ಯಾದಿಗಳು ಹಾಗೂ ಈಗಾಗಲೇ ನೋಂದಾವಣೆಯಾಗಿ ನವೀಕರಣ ಮಾಡಲು ಬಾಕಿ ಇರುವ ಸಂಸ್ಥೆಗಳು ಕಡ್ಡಾಯವಾಗಿ ಒಂದು ವಾರದೊಳಗೆ ನೋಂದಾವಣೆ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯೊಳಗೆ ಸಂಬಂಧಿಸಿದ ಕ್ಲಿನಿಕ್, ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಾವಣೆ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಪಿಎಂಇ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News