ಮಂಗಳೂರು | ಆ್ಯಪಲ್ ಐಫೋನ್‌ನಿಂದ ಗ್ರಾಹಕರಿಗೆ ಸಮಸ್ಯೆ : ಮೊಬೈಲ್ ರಿಟೇಲರ್ಸ್‌ರಿಂದ ಪ್ರತಿಭಟನೆ

Update: 2024-09-17 09:52 GMT

.

ಮಂಗಳೂರು: ಆ್ಯಪಲ್ ಐಒಎಸ್ ಅಪ್‌ಡೇಟ್ ಬಳಿಕ ಮೊಬೈಲ್‌ಸ್ಕ್ರೀನ್‌ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲಾಂಕ್ ಆಗುವ ಸಮಸ್ಯೆಯಿಂದ ಗ್ರಾಹಕರು ತೊಂದರೆ ಅನುಭವಿಸುದ್ದು, ಅದನ್ನು ಬಗೆಹರಿಸುವಂತೆ ಒತ್ತಾಯಿಸಿ ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಸರ್ಕಲ್‌ನಿಂದ ಆ್ಯಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್‌ನ ಎದುರುಗಡೆಯಿಂದ ಕ್ಲಾಕ್‌ ಟವರ್ ವರಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು ಆಗ್ರಹಿಸಿದರು.

ಈ ವೇಳೆ ಮಾತಾಡಿದ ಶೈಲೇಂದ್ರ ಸರಳಾಯ, ನಮ್ಮಲ್ಲಿ ಹಾಗು ಬೇರೆ ಮೊಬೈಲ್ ಖರೀದಿಸಿದ ಹಲವು ಗ್ರಾಹಕರು ಈ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ. ನೊಂದ ಗ್ರಾಹಕರು ಆ್ಯಪಲ್‌ನ ಸರ್ವಿಸ್ ಸೆಂಟರ್ ಮ್ಯಾಪಲ್ ಅನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅವರ ಉಡಾಫೆ ಉತ್ತರ ನೀಡಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಬಳಿಕ ಮಾತಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಘಟನೆಯ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ ಸುವರ್ಣ ಅವರು, ಇದೇ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ. ಕಂಪೆನಿ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಸಂಘಟನೆಯ ಚೇರ್ ಮೆನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಮ್, ಉಪಾಧ್ಯಕ್ಷ ಅಝರ್ ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು :

ಸಾಫ್ಟ್‌ವೇರ್ ಅಪ್ಡೇಟ್‌ನಿಂದ ಹಾನಿಗೊಂಡ ಡಿಸ್ಪ್ಲೇ ಗಳ ಉಚಿತ ಬದಲಾವಣೆ, ಸ್ವತಂತ್ರ ಆ್ಯಪಲ್ ಸೇವಾ ಕೇಂದ್ರಗಳು. ರಿಜಿಸ್ಟ್ರೇಷನ್ ಫೀಸ್ ವಸೂಲಿ ಮಾಡದಿರುವುದು. ಬಳಕೆದಾರರು ತಮ್ಮದೇ ಆದ ಸಾಧನಗಳನ್ನು ಸರಿಪಡಿಸಲು ಅಥವಾ ತೃತೀಯ ಪಾರ್ಟಿ ತಂತ್ರಜ್ಞರಿಂದ ಸರಿಪಡಿಸಲು ಅವಕಾಶವನ್ನು ಒದಗಿಸುವುದು ಹಾಗೂ ಗ್ರಾಹರನ್ನು ಕಡೆಗಣನೆ ಮಾಡದಿರುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News