ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಸಾಗಾಟದ ಚಿನ್ನ ವಶ

Update: 2023-11-09 14:11 GMT

ಮಂಗಳೂರು, ನ.9: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅ.31ರಿಂದ ನ.5ರ ಮಧ್ಯೆ ಮೂವರು ಪ್ರಯಾಣಿಕರಿಂದ 42,90,060 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅ.31ರಿಂದ ನ.2ರ ಮಧ್ಯೆ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾದ ವಿಮಾನದ ಮೂಲಕ ಬಂದಿಳಿದ ಇಬ್ಬರಿಂದ 17,49,660 ರೂ. ಮೌಲ್ಯದ 228 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪೇಸ್ಟ್ ರೂಪದ ಚಿನ್ನ ಹಾಗೂ ಚಿನ್ನದ ಸರವನ್ನು ಒಳ ಉಡುಪು, ಸಾಕ್ಸ್ ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು ಎನ್ನಲಾಗಿದೆ.

ನ.5ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಪ್ರಯಾಣಿಕನಿಂದ ಚಾಕಲೇಟ್ ರೂಪದಲ್ಲಿ ಚಿನ್ನದ ಪೌಡರ್ ವಶಪಡಿಸಿಕೊಳ್ಳಲಾಗಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನ ಟ್ರಾಲಿ ಬ್ಯಾಗನ್ನು ಕಸ್ಟಮ್ಸ್ ಅಧಿಕಾರಿಗಳು ಸ್ಕಾನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಾಕಲೇಟ್ ಪ್ಯಾಕೆಟ್ ಕಂಡುಬಂದಿದೆ. ಅದನ್ನು ತೆರೆದು ನೋಡಿದಾಗ ಹಳದಿ ಬಣ್ಣದ ಪೌಡರ್ ಕಂಡು ಬಂದಿತ್ತು.

24 ಕ್ಯಾರೆಟ್ ಶುದ್ಧ ಚಿನ್ನವನ್ನು ಪೌಡರ್ ರೂಪಕ್ಕಿಳಿಸಿ ಬೇರೊಂದು ಹುಡಿಯ ಜೊತೆಗೆ ಮಿಕ್ಸ್ ಮಾಡಿ ಬೆಳ್ಳಿಯ ಕಲರಿನ ಪ್ಲಾಸ್ಟಿಕ್ ಪೇಪರ್‌ನಲ್ಲಿ ಕಟ್ಟಿಡಲಾಗಿತ್ತು. ಈ ರೀತಿಯ 420 ಗ್ರಾಂ ತೂಕದ ಏಳು ಚಾಕ್ಲೆಟ್ ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ 25,49,400 ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News