ಮಂಗಳೂರು: ಕೆ.ಪಿ.ಎಸ್‌.ಸಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳ ಬಳಕೆ!

Update: 2023-12-17 15:22 GMT

ಮಂಗಳೂರು: ಕರ್ನಾಟಕ‌ ಲೋಕಸೇವಾ ಆಯೋಗ ರವಿವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ತಪಾಸಣೆಗೆ ಮಂಗಳೂರಿನ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿರುವ ಘಟನೆ ವರದಿಯಾಗಿದೆ.

ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಯ ಆಯ್ಕೆಗೆ ನಗರದ ಬಲ್ಮಠದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆ ವೇಳೆ ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಬಲ್ಮಠ ಕಾಲೇಜು ಸೇರಿದಂತೆ ಮಂಗಳೂರಿನ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಸರಕಾರ ಸ್ಪರ್ಧಾತ್ಮಕ ಪರೀಕ್ಷೆಯ ಭದ್ರತಾ ಉಸ್ತುವಾರಿಗೆ ಇಲಾಖೆ ವಿದ್ಯಾರ್ಥಿಗಳನ್ನು ಬಳಸಿಕೊಂಡ ಹಿನ್ನೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ತರಬೇತಿ ಇಲ್ಲದ‌ ವಿದ್ಯಾರ್ಥಿಗಳು ಮೆಟಲ್ ಡಿಟೆಕ್ಟರ್ ಹಿಡಿದು ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡಿರುವುದು ವಿವಾದವನ್ನುಂಟು ಮಾಡಿದೆ.

ಇದರಿಂದಾಗಿ ಸರಿಯಾಗಿ ತಪಾಸಣೆಗೆ ಒಳಗಾಗದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಪರೀಕ್ಷೆಯ ವೇಳೆ ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಬಾಡಿ ಕ್ಯಾಮರಾ ಬಳಕೆಗೆ ಕೆಪಿಎಸ್ಸಿ ಸೂಚಿಸಿತ್ತು.

ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಏಳೆಂಟು ವಿದ್ಯಾರ್ಥಿಗಳು ಅಭ್ಯರ್ಥಿಗಳ ತಪಾಸಣೆ ನಡೆಸಿರುವುದರಿಂದ ಇಲಾಖೆ ಇನ್ನೊಂದು ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.

ಪರೀಕ್ಷಾ ಕೇಂದ್ರಗಳ ತಪಾಸಣೆಗೆ ಕೆಪಿಎಸ್ಸಿಯಿಂದಲೇ ಟೆಂಡರ್ ಮೂಲಕ ಏಜೆನ್ಸಿ ನೇಮಕವಾಗಿತ್ತು. ಈ ಬಗ್ಗೆ ಏಜೆನ್ಸಿಗೆ ಸಂಬಂಧಿಸಿದವರ ಬಳಿ ಮಾಹಿತಿ ಪಡೆಯಲಾಗುವುದು. ಮಕ್ಕಳೇ ತಪಾಸಣೆ ನಡೆಸಿದ್ದರೆ ಎಂಬುದು ಸ್ಪಷ್ಟವಾಗಿಲ್ಲ. ಆದರೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ. 









Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News