ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತ್ಯು

Update: 2024-09-24 07:17 GMT

ಮಂಗಳೂರು: ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ "ಫ್ಲೋಂಟ್" ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ವಿವಾಹಿತ ಯುವಕನೊಬ್ಬ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಮೃತಪಟ್ಟವರು. ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಶನಿವಾರ ಬೆಳಗ್ಗೆ "ಫ್ಲೋಂಟ್" ಕ್ಲಿನಿಕ್ ಗೆ ತೆರಳಿದ್ದರು. ಮಾಝಿನ್ ರೊಂದಿಗೆ ಅವರ ತಾಯಿ ಮತ್ತು ಪತ್ನಿ ಕೂಡಾ ಇದ್ದು, ಹೊರಗೆ ಕಾಯುತ್ತಿದ್ದರು. ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಈ ಸಣ್ಣ ಶಸ್ತ್ರ ಚಿಕಿತ್ಸೆಯು ಸಂಜೆಯಾದರೂ ಮುಗಿಯಲಿಲ್ಲ ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಮಾಝಿನ್ ರ ತಾಯಿ ಮತ್ತು ಪತ್ನಿ ವಿಚಾರಿಸಿದಾಗ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ ಎಂಬ ಉತ್ತರ ಲಭಿಸಿದೆ. ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಬಗ್ಗೆ ಶಮನ್ ಇಬ್ರಾಹಿಂ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ವೈದ್ಯರ ನಿರ್ಲಕ್ಷ್ಯದ ಆರೋಪ : ಮಾಝಿನ್ ಪ್ರಾಣ ಕಳಕೊಳ್ಳಲು ಫ್ಲೋಂಟ್ ಕ್ಲಿನಿಕ್ ನ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿದ್ದರಿಂದ ಹೀಗಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಈ ಕ್ಲಿನಿಕ್ ತೀರಾ ಇಕ್ಕಟ್ಟಾದ ಸ್ಥಳದಲ್ಲಿದೆ. ಮಾಝಿನ್ ಪ್ರಜ್ಞೆ ಕಳಕೊಂಡಾಗ ತಕ್ಷಣ ಆ್ಯಂಬುಲೆನ್ಸ್ ತರಿಸಲಾಯಿತು. ಆದರೆ ಕ್ಲಿನಿಕ್ ಬಳಿ ಸ್ಟ್ರಚ್ಚರ್ ಕೊಂಡೊಯ್ಯಲು ಆಗಲಿಲ್ಲ. ಕೊನೆಗೆ ಮಾಝಿನ್ ಅವರನ್ನು ಹೇಗೋ ಆ್ಯಂಬುಲೆನ್ಸ್ ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾಝಿನ್ ಮೃತಪಟ್ಟಿರುವ ವಿಷಯವು ಫ್ಲೋಂಟ್ ಕ್ಲಿನಿಕ್ ನ ಮುಖ್ಯಸ್ಥರ ಗಮನಕ್ಕೆ ತಂದಿದ್ದರೂ ಅವರು ಕನಿಷ್ಟ ಮಾಝಿನ್ ರ ಕುಟುಂಬವನ್ನು ಭೇಟಿಯಾಗಿ ಕ್ಷಮೆಕೋರಿ, ಸಾಂತ್ವನ ಹೇಳುವ ಪ್ರಯತ್ನ ಮಾಡಲಿಲ್ಲ. ಇದು ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಕಾಸ್ಮೆಟಿಕ್ ಸರ್ಜರಿಯ ವೇಳೆ ಮೂಲಭೂತ ಸೌಕರ್ಯವಿಲ್ಲದ ಇಂತಹ ಕ್ಲಿನಿಕ್ ಗಳತ್ತ ಸುಳಿಯದಿರಿ ಎಂದು ಸಾಮಾಜಿಕ ಕಾರ್ಯಕರ್ತ ರಿಝ್ವಾನ್ ಪಾಂಡೇಶ್ವರ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News