ಮಂಗಳೂರು | ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

Update: 2024-12-14 09:43 GMT

ಮಂಗಳೂರು, ಡಿ.14: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದುಗಳಿದ ವರ್ಗಗಳ 12 ನಿಗಮಗಳಿಗೆ ಕಳೆದ 19 ತಿಂಗಳಿನಲ್ಲಿ ಒಂದು ರೂಪಾಯಿ ಅನುದಾನವನ್ನೂ ನೀಡಿಲ್ಲ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ ಸರಕಾರ ಅನ್ಯಾಯ ಎಸಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಕಾಂಗ್ರೆಸ್ ಸರಕಾರ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಪಿವಿಎಸ್ ವೃತ್ತದ ಬಳಿ ಶನಿವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರಕಾರ ದೊಡ್ಡ ಕೊಡುಗೆ ನೀಡಿತ್ತು. ಹಿಂದುಗಳಿದ ವರ್ಗಗಳಿಗೆ ಸೇರಿದ ವಿವಿಧ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಅಹಿಂದ, ಹಿಂದುಳಿದ ವರ್ಗಗಳ ಪರ ಎಂದು ಹೇಳುವ ಸಿದ್ದರಾಮಯ್ಯ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಅರಿವು ಯೋಜನೆಯನ್ನು ಕಿತ್ತುಕೊಳ್ಳಲಾಗಿದೆ. ವಿದ್ಯಾನಿಧಿ, ಮಹಿಳಾ ಸ್ವಾವಲಂಬಿ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಬದಲಾಗಿ ವಿವಿಧ ನಿಗಮ, ಯೋಜನೆಗಳಲ್ಲಿ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ನಿರತವಾಗಿದೆ ಎಂದು ಆರೋಪಿಸಿದರು.

ಬಸವರಾಜ ಬೊಮ್ಮಾಯಿ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಗಳಿದ ವರ್ಗಗಳ ಅಭಿವೃದ್ಧಿಗಾಗಿ 31.23 ಕೋಟಿ ರೂ. ಅನುದಾನಕ್ಕೆ ಆದೇಶ ನೀಡಿತ್ತು. ಈ ಅನುದಾನದಲ್ಲಿ 14 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಸಿದ್ದರಾಮಯ್ಯ ಸರಕಾರ ಈ ಆದೇಶವನ್ನು ವಾಪಸ್ ಪಡೆದಿದೆ. ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ. ಅಂದು ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಮಂಗಳೂರಿನಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡಿದವರು ಈಗ ಎಲ್ಲಿದ್ದಾರೆ? ಜಿಲ್ಲೆಯ ಸಮುದಾಯ ಭವನಗಳಿಗೆ ಮೀಸಲಿಟ್ಟ ಹಣವೂ ವಾಪಸ್ ಪಡೆಯಲಾಗಿದೆ. ಇದರಿಂದಾಗಿ ದೇವಾಡಿಗ, ಕುಡುಬಿ, ಮೊಗವೀರ, ಬಿಲ್ಲವ, ಶೆಟ್ಟಿಗಾರ್ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಶಾಸಕ ಕಾಮತ್ ಹೇಳಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆಗಳನ್ನು ಹುಸಿ ಮಾಡಿ, ಆಡಳಿತದಲ್ಲಿ ವಿಫಲಗೊಂಡಿದೆ. ದಲಿತ ಮೀಸಲು ನಿಧಿಯನ್ನು ಬೇರೆ ಯೋಜನೆಗೆ ವರ್ಗಾವಣೆ ಮಾಡಿದ ಬಳಿಕ ಇದೀಗ ಹಿಂದುಗಳಿದ ವರ್ಗಗಳ ನಿಗಮಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಹಿಂದುಗಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಬಜೆಟ್ ನಲ್ಲಿ 1600 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಕಾಂಗ್ರೆಸ್ ಸರಕಾರದ ಇದುವರೆಗೆ 57 ಕೋಟಿ ಮಾತ್ರ ನೀಡಿದೆ. ಬಿಜೆಪಿ ಸರಕಾರ ಇದ್ದಾಗ ಹಿಂದುಗಳಿದ ವರ್ಗಗಳಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿತ್ತು ಎಂದರು.

ಬಿಜೆಪಿ ಹಿಂದುಗಳಿದ ವರ್ಗಗಳ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿದರು.

ಮೇಯರ್ ಮನೋಜ್ ಕುಮಾರ್, ಉಪ ಮೇಯರ್ ಭಾನುಮತಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಮುಖಂಡರಾದ ಪೂರ್ಣಿಮಾ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ನಂದನ್ ಮಲ್ಯ, ರಮೇಶ್ ಕಂಡೆಟ್ಟು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News