ವೇತನ ಹೆಚ್ಚಳ ಸಹಿತ ವಿವಿಧ ಭೇಡಿಕೆಗಳ ಈಡೇರಿಕೆಗೆ ಆಗ್ರಹ: ಮಂಗಳೂರಿನಲ್ಲಿ ಬೀದಿಗಿಳಿದ ಎಂಬಿಕೆ- ಎಲ್.ಸಿ.ಆರ್.ಪಿ. ನೌಕರರು

Update: 2023-12-01 08:28 GMT

ಮಂಗಳೂರು, ಡಿ.1: ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಎಲ್.ಸಿ.ಆರ್.ಪಿ.) ಮಾಸಿಕ 2,500 ರೂ.ನಿಂದ 5,000 ರೂ.ವರೆಗೆ ಗೌರವಧನ ಮಾತ್ರ ನೀಡಲಾಗುತ್ತಿದೆ. ಸರಕಾರದ ಗ್ಯಾರಂಟಿ ಯೋಜನೆಗಳಂತೆ ಈ ನೌಕರರ ಬದುಕಿಗೂ ಗ್ಯಾರಂಟಿ ಕೊಡಬೇಕು. ಕನಿಷ್ಠ ವೇತನ ಸಿಗಬೇಕು ಎಂದು ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಒತ್ತಾಯಿಸಿದ್ದಾರೆ.

ಎಂಬಿಕೆ- ಎಲ್.ಸಿ.ಆರ್.ಪಿ.ಗಳ ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಹಂಪನಕಟ್ಟೆಯ ಮಿನಿ ವಿಧಾನ ಸೌಧದ ಎದುರು ಶುಕ್ರವಾರ ಆಯೋಜಿಸಿದ್ದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸರಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸುವ ಈ ಮಹಿಳಾ ನೌಕರರನ್ನು ಹಿಂದೆಲ್ಲಾ ಎರಡು ಗಂಟೆ ದುಡಿಸಲಾಗುತ್ತಿತ್ತು. ಇದೀಗ ಬೆಳಗ್ಗಿನಿಂದ ಸಂಜೆಯವರೆಗೂ ಕೆಲಸ ಮಾಡುವ ಆದೇಶ ಬಂದಿದೆ. ಗುತ್ತಿಗೆ ಆಧಾರದಲ್ಲಿ ನೌಕರರನ್ನು ಜೀತದಾಳುಗಳಂತೆ ದುಡಿಸುವ ಸಂದರ್ಭ, ತಕ್ಕ ರೀತಿಯಲ್ಲಿ ವೇತನ ನೀಡುವ ಬಗ್ಗೆಯೂ ಆದೇಶವಾಗಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.

ಎಂಬಿಕೆ- ಎಲ್ಸಿಆರ್ಪಿಗಳು ನಡೆಸುತ್ತಿರುವ ಈ ಸಂಘಟಿತ ಹೋರಾಟವನ್ನು ಸರಕಾರ ಪರಿಗಣಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ಪ್ರತಿಭಟನೆಗೆ ಸ್ಪಂದನ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಬಿಗಿಗೊಳಿಸುವಲ್ಲಿ ತಾವು ಬೆಂಬಲ ನೀಡುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಧ್ಯಾ, ಮುಖ್ಯ ಪುಸ್ತಕ ಬರಹಗಾರರಿಗೆ 20,000 ರೂ. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ 15000 ರೂ. ಮಾಸಿಕ ವೇತನ ನಿಗದಿಪಡಿಸಬೇಕು. ಪ್ರಯಾಣ ಭತ್ತೆ ಒದಗಿಸಬೇಕು. ಇಎಸ್ಐ, ಪಿಎಫ್ ಸೌಲಭ್ಯ ನೀಡಬೇಕು. ಸಮವಸ್ತ್ರ, ಗುರುತಿನ ಚೀಟಿ ಒದಗಿಸಬೇಕು. ಇಲಾಖೆ ಕೆಲಸಬಿಟ್ಟು ಬೇರೆ ಇಲಾಖೆಯ ಕೆಲಸ ಮಾಡಲು ಒತ್ತಡ ಹೇರಬಾರದು ಎಂದು ಆಗ್ರಹಿಸಿದರು.

ದ.ಕ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಗಳಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಎಂಬಿಕೆ- ಎಲ್.ಸಿ.ಆರ್.ಪಿ. ನೌಕರರು ತಮಗೆ ನ್ಯಾಯ ಒದಗಿಸಬೇಕೆಂದು ಘೋಷಣೆ ಕೂಗಿದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ಸೌಮ್ಯಾ ಯಶವಂತ್ ಧರಣಿಯ ಅಧ್ಯಕ್ಷತೆ ವಹಿಸಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News