ಡಿ.14ರಿಂದ ಮಂಗಳೂರು - ಬೆಂಗಳೂರು ಸಂಪರ್ಕಿಸುವ ಬಹುತೇಕ ರೈಲುಗಳ ಸಂಚಾರ ರದ್ದು

Update: 2023-12-12 13:04 GMT

ಸಾಂದರ್ಭಿಕ ಚಿತ್ರ

ಮಂಗಳೂರು: ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಮೇಲ್ದರ್ಜೆಗೇರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಡಿಸೆಂಬರ್ 14ರಿಂದ 22 ತನಕ ಮಂಗಳೂರು- ಬೆಂಗಳೂರು ಮಾರ್ಗದ ಬಹುತೇಕ ಎಲ್ಲ ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.

ಈ ಅವಧಿಯಲ್ಲಿ ಹಾಸನ ಜಂಕ್ಷನ್ ಯಾರ್ಡ್‌ನಲ್ಲಿ ಸಿಗ್ನಲಿಂಗ್, ಇಂಟರ್ಲೋಕ್ ಹಾಗೂ ವಿವಿಧ ಇಂಜಿನಿಯರಿಂಗ್ ವ್ಯವಸ್ಥೆ ಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯವು ಅನುಮತಿ ನೀಡಿದೆ ಎಂದು ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಮ್ಯಾನೇಜರ್ (ಕಾರ್ಯಾಚರಣೆ) ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ರೈಲು ಸಂಖ್ಯೆ 16511 ಬೆಂಗಳೂರು- ಮಂಗಳೂರು- ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 16 ರಿಂದ ಡಿಸೆಂಬರ್ 20 ತನಕ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16512 ಕಣ್ಣೂರು- ಮಂಗಳೂರು- ಬೆಂಗಳೂರು ಮತ್ತು ರೈಲು ಸಂಖ್ಯೆ 16596 ಕಾರವಾರ - ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದುಗೊಳಿಸಲಾಗಿದೆ.

ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್‌ನ್ನು ಡಿಸೆಂಬರ್ 14, 17, 19 ಮತ್ತು 21 ರಂದು ರದ್ದುಗೊಳಿಸಲಾಗಿದೆ. ಮಂಗಳೂರು ಜಂಕ್ಷನ್- ಯಶವಂತಪುರ ಗೋಮಟೇಶ್ವರ ಎಕ್ಸ್‌ಪ್ರೆಸ್ 16576ನ್ನು ಡಿಸೆಂಬರ್ 15, 18, 20 ಮತ್ತು 22 ರಂದು ರದ್ದುಗೊಳಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ನಂಬರ್ 16515 ಪ್ರಯಾಣವನ್ನು ಡಿಸೆಂಬರ್ 13, 15,18,20 ಮತ್ತು 22 ರಂದು ರದ್ದುಪಡಿಸಲಾಗಿದೆ.

ವಾರದಲ್ಲಿ ಮೂರು ದಿನ ಸಂಚರಿಸುವ ಕಾರವಾರ- ಯಶವಂತಪುರ ನಂಬರ್ 16516 ನಂಬರ್ ರೈಲು ಸೇವೆಯನ್ನು ಡಿಸೆಂಬರ್ 14, 16, 19, 21 ಮತ್ತು 23 ರಂದು ರದ್ದುಗೊಳಿಸಲಾಗಿದೆ.

ಡಿಸೆಂಬರ್ 16 ಮತ್ತು 17 ರಂದು ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ರೈಲ್(16539/ 16540) ಓಡಾಟವನ್ನು ಕ್ರಮವಾಗಿ ರದ್ದುಪಡಿಸಲಾಗಿದೆ.

ಲಭ್ಯ ರೈಲು ಮಾರ್ಗ

ಈ ಅವಧಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು- ಮುರ್ಡೇಶ್ವರ-ಬೆಂಗಳೂರು (ರೈಲು ಸಂಖ್ಯೆ. 16585/ 586 ) ರಾಜಧಾನಿಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಏಕೈಕ ರೈಲು ಆಗಿರುತ್ತದೆ.

ಡಿಸೆಂಬರ್ 14 ರಿಂದ ಡಿಸೆಂಬರ್ 16 ರವರೆಗೆ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮಾರ್ಗವಾಗಿ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಈ ರೈಲುಗಳು ಕಾರ್ಯನಿರ್ವಹಿಸಲಿದೆ.

ಡಿಸೆಂಬರ್ 17 ರಿಂದ ಡಿಸೆಂಬರ್ 22 ರವರೆಗೆ ಈ ರೈಲುಗಳು ಮೈಸೂರು ಮಾರ್ಗವನ್ನು ಬಿಟ್ಟು ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮಾರ್ಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News