ಮಂಗಳೂರಿನ ಬಗ್ಗೆ ಹೊರಗಿನವರಿಗಿರುವ ನಕಾರಾತ್ಮಕ ಕಲ್ಪನೆಯ ನಿವಾರಣೆ ಅಗತ್ಯ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಐಟಿ ವಲಯದಲ್ಲಿ 500 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿರುವ ಮಂಗಳೂರಿನಲ್ಲಿ ಐಟಿ ಉದ್ಯಮಗಳಗೆ ನೆಲೆ ಕಂಡುಕೊಳ್ಳಲು ಅವಕಾಶ, ಸೌಲಭ್ಯಗಳು ಇದ್ದರೂ ಹೊರಗಿನವರಿಗೆ ಮಂಗಳೂರು ಐಟಿ ಉದ್ಯಮಕ್ಕೆ ಸುರಕ್ಷಿತ ಜಾಗವಲ್ಲ ಎಂಬ ನಕಾರಾತ್ಮಕ ಕಲ್ಪನೆಯನ್ನು ದೂರ ಮಾಡುವಲ್ಲಿ ಶ್ರಮಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಐಟಿ ಟಾಸ್ಕ್ ಫೋರ್ಸ್ ಆಯೋಜಿಸಿದ್ದ ‘ಮಂಗಳೂರಿನ ಐಟಿ ಅಲೆ: ಭಾರತದ ಸಿಲಿಕಾನ್ ಬೀಚ್ ಕಡೆಗೆ ಸರ್ಫಿಂಗ್’ ಐಟಿ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಮೊದಲು ಮಂಗಳೂರಿನಲ್ಲಿ ಅನನ್ಯತೆ, ವಿಶೇಷತೆ, ಪ್ರಾಕೃತಿಕ ಸೌಂದರ್ಯ, ಸೌಲಭ್ಯಗಳು ಸೇರಿದಂತೆ ಮಂಗಳೂರಿನ ವೈಶಿಷ್ಟ್ಯಗಳ ಬಗ್ಗೆ ಹೊರಗಿನವರಿಗೆ ಮನಮುಟ್ಟುವಂತೆ ತಿಳಿಸಬೇಕಾಗಿದೆ ಎಂದರು.
ಐಟಿ ಕ್ಷೇತ್ರದ ಬೆಳವಣಿಗೆಗೆ ಅನುಕೂಲವಾಗುವಂತೆ ಮತ್ತು ನಗರವನ್ನು ‘ಸಿಲಿಕಾನ್ ಬೀಚ್’ ಮಾಡಲು ಮಂಗಳೂರಿನ ಬ್ರ್ಯಾಂಡಿಂಗ್ ಮತ್ತು ಸ್ಥಾನೀಕರಣದ ಅಗತ್ಯವನ್ನು ಬ್ರಿಜೇಶ್ ಚೌಟ ಹೇಳಿದರು.
ಮಂಗಳೂರು ಐಟಿ ಕ್ಷೇತ್ರದಲ್ಲಿ ಸಾಧಿಸಬೇಕಿದ್ದ ಸಾಧನೆಯನ್ನು ಏಕೆ ಸಾಧಿಸಿಲ್ಲ ಎಂಬುದನ್ನು ನಾವು ಚರ್ಚಿಸಬೇಕಾಗಿದೆ ಎಂದರು.
ಮಂಗಳೂರಿನ ಅನೇಕರು ಮುಂಬೈ ಮತ್ತು ಬೆಂಗಳೂರಿಗೆ ತೆರಳಿದ ನಂತರ ಐಟಿ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ. ಅವರು ಇತರ ನಗರಗಳಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾದರೆ, ಎಲ್ಲಾ ಸಾಮರ್ಥ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಅದನ್ನು ಏಕೆ ಮಾಡಲು ಸಾಧ್ಯವಾಗಲಿಲ್ಲ ಎಂಬ ವಿಚಾರದ ಬಗ್ಗೆ ನಾವು ಚಿಂತಿಸಬೇಕಾಗಿದೆ.‘ಐಟಿ ವಲಯದ ತಜ್ಞರು ತಿಂಗಳಿಗೊಮ್ಮೆ ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಂಗಳೂರು ನಗರದಲ್ಲಿ ರಾತ್ರಿ ಹೊತ್ತು ಹೋಟೆಲ್, ಮಾಲ್, ಸೇರಿದಂತೆ ಅಂಗಡಿ ಮುಂಗಟ್ಟು ಬೇಗ ಬಂದ್ ಆಗುತ್ತಿದೆ. ಈ ಕಾರಣಕ್ಕಾಗಿ ಕಂಪನಿಗಳು ಇಲ್ಲಿಗೆ ಬರಲು ಹಿಂಜರಿತ್ತಿವೆ ಎಂಬ ವಾದವನ್ನು ಸಂಸದ ಬ್ರಿಜೇಶ್ ಚೌಟ ನಿರಾಕರಿಸಿದರು.
ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಪರ್ಕವನ್ನು ಸುಧಾರಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಸಂಸದರು ಹೇಳಿದರು. ಮಂಗಳೂರಿನೊಂದಿಗೆ ಉತ್ತಮ ಸಂಪರ್ಕವು ಕರ್ನಾಟಕದ ಜಿಡಿಪಿ ಹೆಚ್ಚಳಕ್ಕೆ ಸಹಾಯಕ ವಾಗುತ್ತದೆ. ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ 2025ರ ಮಾರ್ಚ್‌ಗೆ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಶಿರಾಡಿ ಬಳಿಕ ಮಾರ್ನಹಳ್ಳಿ ತನಕ ಹೆದ್ದಾರಿ ಕಾಮಗಾರಿ ಆಗಬೇಕಿದೆ. ಶಿರಾಡಿ ಘಾಟಿಯಲ್ಲಿ ಮಂಗಳೂರು- ಬೆಂಗಳೂರು ರೈಲ್ವೇ, ಬಸ್ ಸಂಪರ್ಕಕ್ಕಾಗಿ ಪ್ರತ್ಯೇಕ ಲೈನ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಮಂಗಳೂರು-ಮುಂಬೈ ನಿರಂತರ ವಿಮಾನ ಸಂಪರ್ಕ ಹೆಚ್ಚಳ, ಮಂಗಳೂರು ರನ್‌ವೇ ವಿಸ್ತರಣೆಗೆ ಪ್ರಯತ್ನಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆಗೆ ಸಂಸದರು, ಮಂಗಳೂರು ಮತ್ತು ಸುತ್ತಮುತ್ತ ಲಭ್ಯವಿರುವ ಸರಕಾರಿ ಜಮೀನಿನ ವಿವರ ಕೇಳಿರುವುದಾಗಿ ತಿಳಿಸಿದರು. ಮಂಗಳೂರು-ಮುಂಬೈ ನಿರಂತರ ವಿಮಾನ ಸಂಪರ್ಕ ಹೆಚ್ಚಳ, ಮಂಗಳೂರು ರನ್‌ವೇ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಮಂಗಳೂರಿನಲ್ಲಿ ಐಟಿ ಹಬ್ ಸ್ಥಾಪನೆಗೆ ಬದ್ಧ
ಮಂಗಳೂರಿಗೆ ಐಟಿ ಕಂಪೆನಿಗಳನ್ನು ಸೆಳೆಯುವ ಜತೆಗೆ, ಇಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಕಂಪನಿಗಳನ್ನು ಬೆಳೆಸಬೇಕಾಗಿದೆ ಮಂಗಳೂರಿನಲ್ಲಿ ಕಂಪೆನಿಗಳಿಗೆ ನೆಲೆ ಕಂಡುಕೊಳ್ಳಲು ಪೂರಕ ವಾತಾವರಣ, ಸೌಲಭ್ಯ ಇದೆ. ಮಂಗಳೂರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಾಣವನ್ನಾಗಿ ಮಾಡಲು ಬೇಕಾದ ಎಲ್ಲ ಮೂಲ ಸೌಲಭ್ಯ ಕಲ್ಪಿಸಿಕೊಡಲು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ಸಚಿವರ ಜತೆ ಚರ್ಚೆ ನಡೆಸಿರುವುದಾಗಿ ಚೌಟ ಮಾಹಿತಿ ನೀಡಿದರು.
ಮಂಗಳೂರು ನೋವಿಗೊ ಸೊಲ್ಯೂಷನ್ಸ್ ಸಿಇಒ ಪ್ರವೀಣ್ ಕಲ್ಬಾವಿ ಸಂಸದರೊಂದಿಗೆ ಸಂವಾದ ನಡೆಸಿಕೊಟ್ಟರು.
ಮಂಗಳೂರು ಇನ್ಫೋಸಿಸ್‌ನ ಮುಖ್ಯಸ್ಥ ವಾಸುದೇವ ಕಾಮತ್, 99 ಗೇಮ್ಸ್ ಸ್ಥಾಪಕ ರೋಹಿತ್ ಭಟ್, ಕೆಸಿಸಿಐ ಅಧ್ಯಕ್ಷ ಆನಂದ್ ಜಿ ಪೈ, ಕೊಡ್‌ಕ್ರಾಫ್ಟ್ ಟೆಕ್ನೋಲಜಿಯ ದಿಕ್ಷಿತ್ ರೈ ಸೇರಿದಂತೆ ವಿವಿಧ ಕಂಪೆನಿಗಳ ಪ್ರಮುಖರು ಭಾಗವಹಿಸಿದ್ದರು.
ಸಿಐಐ ಐಟಿ ಕನ್ವೀನರ್ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಅಶಿತ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶೀರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಬೋಧ್ ವಂದಿಸಿದರು.