ಮುಮ್ತಾಝ್ ಅಲಿ ಪ್ರಕರಣ: ಮೂವರು ಆರೋಪಗಳ ಹೆಚ್ಚುವರಿ ಕಸ್ಟಡಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್
ಸುರತ್ಕಲ್: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣ ಸಂಬಂಧ ಮೂವರು ಆರೋಪಿಗಳ ಹೆಚ್ಚುವರಿ ಕಸ್ಟಡಿಗೆ ಕೇಳಿದ್ದ ಕಾವೂರು ಪೊಲೀಸರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಪ್ರಮುಖ ಆರೋಪಿ ರೆಹಮತ್‌ನ ಪತಿ ಪ್ರಕರಣದ 5ನೇ ಆರೋಪಿ ಶುಐಬ್, 3ನೇ ಆರೋಪಿ ನಂದಾವರ ನಿವಾಸಿ ಕಲಂದರ್ ಶಾಫಿ, 4ನೇ ಆರೋಪಿ ಕೃಷ್ಣಾಪುರ ನಿವಾಸಿ ಮುಸ್ತಫಾ ಎಂಬವರನ್ನು ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತನಿಖಾಧಿಕಾರಿಯ ಅರ್ಜಿಯ ತನಿಖೆ ನಡೆಸಿದ ನ್ಯಾಯಾಲಯ ಆತ್ಮಹತ್ಯೆಯಂತಹಾ ಪ್ರಕರಣದಲ್ಲಿ 40 ದಿನಗಳ ಒಳಗಾಗಿ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಲಾಗುವುದು. ಆ ಬಳಿಕ ನೀಡಲು ಸಾಧ್ಯವಿಲ್ಲ. ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಿಸಿ ಕಸ್ಟಡಿ ಅರ್ಜಿಯನ್ನು ವಜಾಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ತನಿಖಾಧಿಕಾರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿ ದ್ದರು. ಅರ್ಜಿ ತನಿಖೆಗೆ ಎತ್ತಿಕೊಂಡ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿತ್ತು. ಹಾಗಾಗಿ ಕಸ್ಟಡಿ ಅರ್ಜಿ ವಜಾ ಗೊಳಿಸಿರುವುದನ್ನು ಪ್ರಶ್ನಿಸಿ ತನಿಖಾಧಿಕಾರಿ ಮತ್ತೆ ಸುಪ್ರೀಂ ಕೋರ್ಟ್ ಗೆ ಅರ್ಜಿಸಲ್ಲಿಸಿದ್ದರು.
ಈ ಮಧ್ಯೆ ಆರೋಪಿಗಳು ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಕಸ್ಟಡಿ ಅರ್ಜಿ ವಿಚಾರಣೆ ನಡೆಯುವ ವರೆಗೆ ಆರೋಪಿಗಳಿಗೆ ಯಾವುದೇ ಜಾಮೀನು ಮಂಜೂರು ಮಾಡದಂತೆ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ಗೆ ಸೂಚನೆ ನೀಡಿ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ತಡೆಹಿಡಿದಿತ್ತು.
ಬುಧವಾರ ಆರೋಪಿಗಳ ಕಸ್ಟಡಿ ಸಂಬಂಧಿತ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿಹಿಡಿದಿದ್ದ ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿದೆ. ಅಲ್ಲದೆ, ತನಿಖಾಧಿಕಾರಿ ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಕಸ್ಟಡಿ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿ ಸುಪ್ರಿಂ ಕೋರ್ಟ್ ನಲ್ಲಿ ವಜಾಗೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಜಾಮೀನಿಗಾಗಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.