ವೈದ್ಯರುಗಳು ಅಪ್‌ಡೇಟ್ ಆಗಬೇಕಾಗಿದೆ: ಡಾ.ಭಗವಾನ್

Update: 2025-04-04 22:56 IST
ವೈದ್ಯರುಗಳು ಅಪ್‌ಡೇಟ್ ಆಗಬೇಕಾಗಿದೆ: ಡಾ.ಭಗವಾನ್
  • whatsapp icon

ಮಂಗಳೂರು , ಎ.4: ನಾನಾ ಕ್ಷೇತ್ರಗಳಲ್ಲಿರುವಂತೆ ರೋಬೋಟ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವೈದ್ಯಕೀಯ ರಂಗಕ್ಕೂ ಕಾಲಿರಿಸಿರುವ ಹಿನ್ನೆಲೆಯಲ್ಲಿ ವೈದ್ಯರಿಗೂ ಸವಾಲು ಎದುರಾಗಿದ್ದು , ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಎಲ್ಲವನ್ನು ಇಂತಹ ತಂತ್ರಜ್ಞಾನಗಳ ನೆರವಿನಿಂದ ಎಲ್ಲವನ್ನು ನಿರ್ವಸಬೇಕಾಗ ಬಹುದು. ಹೀಗಾಗಿ ವೈದ್ಯರುಗಳು ನವೀನ ತಂತ್ರಜ್ಞಾನಗಳ ಮಾಹಿತಿಯನ್ನು ಪಡೆಯಬೇಕು, ವೈದ್ಯರು ಅಪ್ ಡೇಟ್ ಆಗಬೇಕಾಗಿದೆ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲ ಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ ಹೇಳಿದ್ದಾರೆ.

ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಜ್ಞಾನ, ವಿಶ್ಲೇಷಣೆ, ಸುರಕ್ಷತೆ ಇಂದಿನ ಶಿಕ್ಷಣದ ಅಗತ್ಯತೆಯಾಗಿದೆ. ಜಗತ್ತಿನಲ್ಲಿ ನಿರಂತರ ಬದಲಾವಣೆ ಗಳು ನಡೆಯುತ್ತಿರುತ್ತವೆ. ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಮ್ಮನ್ನು ನಾವೇ ನವೀಕರಿಸುತ್ತಾ ಜಾಗತೀಕ ಜ್ಞಾನ ಸಂಪಾದಿಸಬೇಕು. ಎಂದು ಅವರು ಹೇಳಿದರು.

ಪದವಿ ಪಡೆಯುವ ಮೂಲಕ ಕಾಲೇಜು ದಿನಗಳು ಮುಕ್ತಾಯವಾಗಬಹುದಾದರೂ, ಜೀವನದ ನೈಜ ಪಯಣ ಇನ್ನು ಆರಂಭಗೊಳ್ಳುತ್ತದೆ ಎನ್ನುವುದನ್ನು ನೂತನ ವೈದ್ಯರಾಗಿ ವೃತ್ತಿ ರಂಗಕ್ಕೆ ಕಾಲಿರಿಸಿದವರು ನೆನಪಿನಲ್ಲಿಟ್ಟುಕೊಳ್ಳಬೇಕು. ಜೀವನದ ಗುರಿಯನ್ನು ಕಾರ್ಯಗತಗೊಳಿಸಲು ಸವಾಲುಗಳನ್ನು ಎದುರಿಸಿ ಕೊಂಡು ಭರವಸೆಯೊಂದಿಗೆ ಎಚ್ಚರದಿಂದ ಮುನ್ನುಗ್ಗಬೇಕು ಎಂದು ನುಡಿದರು.

ಸಹಾನುಭೂತಿಯನ್ನು ಒಳಗೊಂಡಿರಬೇಕು. ಆರೋಗ್ಯ ಸೇವೆಯನ್ನು ಅರಸಿ ಬರುವವರಿಗೆ ಭರವಸೆ ಬೆಳಕಾಗಬೇಕಾಗಿದೆ.

ಹೊಸದಿಲ್ಲಿಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ರಾಜೀವ್ ಕುಮಾರ್ ಅವರು ಮುಖ್ಯ ಅತಿಥಿ ಮಾತನಾಡಿ ವಿದ್ಯಾರ್ಥಿಗಳು ಪಡೆದಿರುವುದು ಕೇವಲ ಪದವಿಯಲ್ಲ. ಜೀವನದ ಮಹತ್ವದ ಜವಾಬ್ದಾರಿಯಾಗಿದೆ. ತಮ್ಮ ಕಠಿಣ ಅಭ್ಯಾಸ ಹಾಗೂ ನಿರಂತರ ಪರಿಶ್ರಮದ ಫಲವಾಗಿದೆ. ಇದರಲ್ಲಿ ಸಮರ್ಪಣೆ, ಸೇವಾ ಭಾವನೆಯ ಅವಶ್ಯಕತೆ ಈ ಜವಾಬ್ದಾರಿ ನಿಭಾಯಿಸಲು ಅಗತ್ಯವಿದೆ.. ಪರಿಶ್ರಮವೇ ಜೀವನದ ಸಾಧನೆಗೆ ನಾಂದಿಯಾಗಲಿದೆ. ಓರ್ವ ಉತ್ತಮ ವೈದ್ಯ ನಿರಂತರ ಕಲಿಕೆಯಲ್ಲಿರುತ್ತಾನೆ. ಎಐ ತಂತ್ರಜ್ಞನ ನಮ್ಮನ್ನು ಬೆದರಿಸಲು ಬಂದಿರುವುದಲ್ಲ. ಬದಲಾಗಿ ಹೊಸ ಅವಿಷ್ಕಾರ ಮಾಡಲು ಅವಕಾಶವನ್ನು ಕಲ್ಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳು ತನ್ನ ಜವಾಬ್ದಾರಿ ಅರಿತುಕೊಂಡು ರೋಗಿಗಳ ಆರೈಕೆಗಾಗಿ ಶ್ರಮಿಸಬೇಕು. ಶಿಕ್ಷಣ ಸಂಸ್ಥೆಯಲ್ಲಿ ಕಲಿತಿರುವ ವಿಚಾರಗಳೊಂದಿಗೆ ಸಮಾಜದ ಸೇವೆಗೆ ಮುಂದಾಗಬೇಕು ಎಂದರು.

ಎಂಬಿಬಿಎಸ್ 153, ಪಿಜಿ ಮೆಡಿಕಲ್ 77, ಅಲೈಡ್ ಹೆಲ್ತ್ 135 ಯುಜಿ, 40 ಪಿಜಿ, ಮತ್ತು ಫಿಸಿಯೋಥೆರಪಿ 54 ಯುಜಿ, 10 ಪಿಜಿ ಸೇರಿದಂತೆ ಒಟ್ಟು 469 ವಿದ್ಯಾರ್ಥಿಗಳು ಪದವಿ ಪಡೆದರು. ಈ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ವಿಜೇತ 61 ಮಂದಿ ಗೌರವಿಸಲಾಯಿತು.

ಎಲ್ಲಾ ಪದವೀಧರರ ಪರವಾಗಿ ಡಾ. ಎನ್. ನಿಶಿತಾ ರಮೇಶ್, ಆಡಳಿತ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಅತ್ಯುತ್ತಮ ಹೊರಹೋಗುವ ಪದವೀಧರ: ಅಕ್ಷತಾ ವೇಗಸ್ ( ಬಿ.ಎಸ್ಸಿ ವಿಭಾಗ. ಎಂಐಟಿ),ಅಂಜೆಲಿನಾ ಮತ್ತು ಥಾಮಸ್( ಬಿಪಿಟಿ)ದಿವಂಗತ ಜಾನ್ ಲಿನು ವರ್ಗೀಸ್ ಸ್ಮಾರಕ ಪ್ರಶಸ್ತಿ, ಎಂಬಿಬಿಎಸ್ ಪದವೀಧರರಿಗೆ ನೀಡಲಾಗುವ ಎಫ್‌ಎಂಸಿಐ ಅಧ್ಯಕ್ಷರ ಚಿನ್ನದ ಪದಕ ವನ್ನು ಡಾ. ಅಭಿಷೇಕ್ ಜೆ ಸ್ಟೀಫನ್ ಹ್ಯಾರಿಸ್ ಇವರು ಪಡೆದರು.

ಫಾದರ್ ಮುಲ್ಲರ್ ಸಂಸ್ಥೆಯ ನಿಯೋಜಿತ ನಿರ್ದೇಶಕ ವಂ ಫಾವುಸ್ತಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಂ. ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂಟೊನಿ ಸಿಲ್ವನ್ ಡಿ’ಸೋಜ, ವೈಸ್ ಡೀನ್ ಡಾ. ವೆಂಕಟೇಶ ಬಿ.ಎಂ., ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್, ಅಲೈಡ್ ಹೆಲ್ತ್ ಸೈನ್ಸ್‌ಸ್‌ನ ಪ್ರಾಂಶುಪಾಲರಾದ ಡಾ. ಹಿಲ್ಡಾ ಡಿಸೋಜ, ಕಾಲೇಜ್ ಆಫ್ ಫಿಸಿಯೋಥೆರಫಿಯ ಪ್ರಾಂಶುಪಾಲರಾದ ಪ್ರೊ. ಚರಿಶ್ಮಾ ಡಿಸಿಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಸಿಲ್ವೆಸ್ಟರ್ ವಿ. ಲೋಬೊ ಅವರು ವಂದಿಸಿದರು.










 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News