ಆ.19ರಂದು ಪುಂಜಾಲಕಟ್ಟೆ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ವಿರುದ್ಧ ಬೃಹತ್‌ ಜನಾಗ್ರಹ ಸಭೆ: ಮುನೀರ್‌ ಕಾಟಿಪಳ್ಳ

Update: 2024-08-14 16:54 GMT

ಬೆಳ್ತಂಗಡಿ: ದ.ಕ. ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳೆಲ್ಲವೂ ಅವ್ಯವಸ್ಥೆಯ ಆಗರವಾಗಿದೆ. ಎಲ್ಲ ರಸ್ತೆಗಳ‌ ಕಾಮಗಾರಿಗಳು‌ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿವೆ. ಹಲವು ಕಾಮಗಾರಿಗಳು ಅರ್ಧದಲ್ಲಿಯೇ ಸ್ಥಗಿತ ಗೊಂಡಿದೆ. ಪೂಂಜಾಲಕಟ್ಟೆ ಚಾರ್ಮಾಡಿ‌ ರಸ್ತೆಯಂತೂ ವಾಹನಸಂಚಾರಕ್ಕೆ ಅಯೋಗ್ಯವಾದ ರೀತಿಯಲ್ಲಿ ಕೆಟ್ಟು ಹೋಗಿದೆ. ಈ ಹಿನ್ನಲೆಯಲ್ಲೆ ಪೂಂಜಾಲಕಟ್ಟೆ ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಹೊತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಆ.19ರಂದು ಬೆಳ್ತಂಗಡಿ ಮಿನಿವಿಧಾನ ಸೌಧದ ಎದುರು ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಸನ ಕಡೆಯಿಂದ ಮಂಗಳೂರು ಸಂಪರ್ಕಿಸುವ ಗುಂಡ್ಯದಿಂದ ಬಿಸಿ ರೋಡ್, ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಸಂಪರ್ಕಿಸುವ ಚಾರ್ಮಾಡಿಯಿಂದ ಪೂಂಜಾಲಕಟ್ಟೆ, ಶಿವಮೊಗ್ಗದಿಂದ ಮಂಗಳೂರು ಸಂಪರ್ಕಿಸುವ ಕಾರ್ಕಳ ಮೂಡಬಿದ್ರೆ, ನಂತೂರು, ಹಾಗೆಯೆ ಮಂಗಳೂರಿನಿಂದ ಉಡುಪಿ ಸಂಪರ್ಕಿಸುವ ನಂತೂರು ನಿಂದ ಸುರತ್ಕಲ್ ರಾಷ್ಟ್ಟೀಯ ಹೆದ್ದಾರಿಗಳಲ್ಲಿ ರಸ್ತೆ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಆರಂಭಗೊಂಡು ಕನಿಷ್ಟ ಐದು ವರ್ಷಗಳಾದರೂ ಆಗಿವೆ. ಈ ಯಾವ ಹೆದ್ದಾರಿಗಳ ಅಗಲೀಕರಣ ಕಾಮಗಾರಿಗಳೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಅರ್ಧಂಬರ್ಧ ಕಾಮಗಾರಿ, ಪರ್ಯಾಯ ರಸ್ತೆ, ಸರ್ವೀಸ್ ರಸ್ತೆ ಯನ್ನು ವ್ಯವಸ್ಥಿತಗೊಳಿಸದೆ ಮನಸ್ಸು ಬಂದಲ್ಲಿ ರಸ್ತೆ ಅಗೆದು ಹಾಕುವುದು, ಹೊಂಡ ಗಳನ್ನು ಮುಚ್ಚದಿರುವುದು ಹೀಗೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಆಗರವಾಗಿದೆ. ಈ ರಸ್ತೆಗಳಲ್ಲಿ ಪ್ರಾಣ ಪಣಕ್ಕಿಟ್ಟು, ಧೈರ್ಯ ಹಾಗೂ ಅಸಹಾಯಕತೆ, ಅನಿವಾರ್ಯತೆಯ ಕಾರಣಕ್ಕೆ ವಾಹನಗಳು ಸಂಚರಿಸಬೇಕಾಗಿದೆ.

ಅದರಲ್ಲೂ ಗುಂಡ್ಯ ದಿಂದ ಬಿಸಿ ರೋಡ್, ಪೂಂಜಾಲಕಟ್ಟೆಯಿಂದ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಥಮ ವಾಗಿ ಗುತ್ತಿಗೆ ಪಡೆದ ದೇಶಮಟ್ಟದಲ್ಲಿ ಪ್ರಖ್ಯಾತರಾದ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ತೊರೆದು ಪಲಾಯನ ಮಾಡಿದರು ಈ ಗುತ್ತಿಗೆದಾರರು ಯಾರ ಕಿರುಕುಳ ತಾಳಲಾರದೆ ಓಡಿ ಹೋದರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಇದರಿಂದ ಕಾಮಗಾರಿ ಅರ್ಧದಲ್ಲಿ ನಿಂತು ಪ್ರಯಾಣಿಕರು ಪಡುತ್ತಿರುವ ಪಾಡು ವಿವರಿಸಲು ಅಸಾಧ್ಯವಾಗಿದೆ.

ನಂತೂರು ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯೂ ಹೀಗೆ ಆರೇಳು ವರ್ಷದಿಂದ ಕುಂಟುತ್ತಿದೆ. ಕೆತ್ತಿಕಲ್ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿ ಅದೀಗ ದೊಡ್ಡ ಅನಾಹುತವನನ್ನು ಎದುರು ನೋಡುತ್ತಿದೆ. ನಂತೂರು ಸುರತ್ಕಲ್ ಹೆದ್ದಾರಿಯಲ್ಲಿ ಹೆಜ್ಜೆಗೊಂದು ಗುಂಡಿ ಬಿದ್ದು ಹಲವು ದ್ಚಿಚಕ್ರ ಸವಾರರು ಪ್ರಾಣ ಕಳೆದುಕೊಂಡರು‌. ಕೂಳೂರು ಬಳಿ ಫಲ್ಗುಣಿ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಾಲ್ಕು ವರ್ಷ ಆದರೂ ಪಿಲ್ಲರ್ ಗಳ ನಿರ್ಮಾಣವೇ ಪೂರ್ಣಗೊಂಡಿಲ್ಲ. ಹಳೆ ಸೇತುವೆ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಿಸುತ್ತಿದೆ. ಅತೀ ದಟ್ಟಣೆಯ ಈ ಹೆದ್ದಾರಿಯಲ್ಲಿ ಕೂಳೂರು ಸೇತುವೆ ದಾಟುವಾಗ ಪ್ರಾಣ ಬಾಯಿಗೆ ಬಂದಿರುತ್ತದೆ. ನಂತೂರು, ಕೆಪಿಟಿ ಮೇಲ್ಸೇತುವೆ ಘೋಷಣೆ ಆಗಿ ಆರು ತಿಂಗಳು ದಾಟಿದರೂ ಗುತ್ತಿಗೆದಾರರು ಇತ್ತ ಸುಳಿದಿಲ್ಲ.

ಕರ್ನಾಟಕದ ಅತ್ಯಂತ ಮುಂದುವರಿದ, ಅಭಿವೃದ್ದಿ ಸಾಧಿಸಿದ, ಸರಕಾರಗಳ ಬೊಕ್ಕಸಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ದಯನೀಯ ಸ್ಥಿತಿ ಇದಾಗಿದೆ. ಇಲ್ಲಿ ಬಿಜೆಪಿಯಿಂದ ಸಂಸದ, ಶಾಸಕರು ಸತತವಾಗಿ ಗೆದ್ದು ಬರುತ್ತಿದ್ದರೂ ಕಾಲ ಕಾಲಕ್ಕೆ ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸುವ, ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣೆಯಲ್ಲಿ ಯಾವುದೇ ಆಸಕ್ತಿ ವಹಿಸದಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಜನತೆಯಂತೂ ಇದನ್ನೆಲ್ಲಾ ಪ್ರಶ್ನಿಸುವ ದಾರಿ ಕಾಣದೆ ಹತಾಶರಾಗಿದ್ದಾರೆ. ಇದನ್ನು ಯಾರಾದರೂ ಪ್ರಶ್ನಿಸಿ ಪ್ರತಿಭಟನೆಗಳನ್ನು ಸಂಘಟಿಸಿದರೆ, ಭಾಗಿಯಾದರೆ ಸಂಸದ, ಶಾಸಕರು, ಅವರ ಹಿಂಬಾಲಕರ ಕೆಂಗಣ್ಣಿಗೆ ಬೀಳವ ಆಂತಕ ಜನರಲ್ಲಿ ಮೂಡಿದೆ ಎಂದು ಅವರು ಆರೋಪಿಸಿದರು.

ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ, ಚಾರ್ಮಾಡಿ ಹೆದ್ದಾರಿಯ ಸಮಸ್ಯೆ ಅಸಹನೀಯವಾಗಿರುವುದರಿಂದ ಜನರ ಬೆಂಬಲದೊಂದಿಗೆ ಈಗ ಪೂಂಜಾಲಕಟ್ಟೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆ, ಕಳಪೆ ಕಾಮಗಾರಿಯ ವಿರುದ್ದ ವಾಗಿ ಕಾಲಮಿತಿಯೊಳಗಡೆ ಗುಣಮಟ್ಟದ ಕಾಮಗಾರಿಯೊಂದಿಗೆ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಪೂರ್ಣಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಹೋರಾಟ ರೂಪಿಸಲು ತೀರ್ಮಾನಿಸಲಾಗಿದೆ ಎಂದರು.

ಸಮಾನ ಮನಸ್ಕರು ಜೊತೆ ಸೇರಿ "ಪೂಂಜಾಲಕಟ್ಟೆ, ಚಾರ್ಮಾಡಿ ರಾಷ್ಟ್ಟೀಯ ಹೆದ್ದಾರಿ ಹಿತರಕ್ಷಣಾ ಸಮಿತಿ" ಯನ್ನು ರಚಿಸಲಾಗಿದೆ ಈ ಸಮಿತಿಯ ನೇತೃತ್ವದಲ್ಲಿ ಆಗಸ್ಟ್ 19 ರಂದು ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಎದುರು ಬೃಹತ್ "ಜನಾಗ್ರಹ ಸಭೆ" ಯನ್ನು ಆಯೋಜಿಸಲಾಗಿದೆ. ಇದು ಪ್ರಸಕ್ತ ರಾಷ್ಟೀಯ ಹೆದ್ದಾರಿ ಅವ್ಯವಸ್ಥೆಯ ವಿರುದ್ದದ ಜನಾಕ್ರೋಶದ ಅಭಿವ್ಯಕ್ತಿಯಾಗಿ ಮೂಡಿಬರುತ್ತಿದೆ ಮುಂದಕ್ಕೆ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಮ್ಮ ಈ ಹೋರಾಟ ಯಾರ ವಿರುದ್ಧದ ವ್ಯಕ್ತಿ ದ್ವೇಷದಿಂದ ಕೂಡಿಲ್ಲ. ಹೆದ್ದಾರಿಗಳು ಕಾಲಮಿತಿಯಲ್ಲಿ ಸಂಚಾರ ಯೋಗ್ಯ ಗೊಳ್ಳಬೇಕು ಎಂಬುದಷ್ಟೆ ನಮ್ಮ ಕಾಳಜಿಯಾಗಿದೆ. ಆದರೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬೆಂಬಲಿಗರು ಈ ಹಿತರಕ್ಷಣಾ ಸಮಿತಿ ವಿರುದ್ಧ ಅಸಹನೆ ವ್ಯಕ್ತಪಡಿಸತೊಡಗಿದ್ದಾರೆ, ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಯಾಕೆ ಎಂಬುದು ಪ್ರಶ್ನೆಯಾಗಿದೆ. ಸಂಸದರು, ಶಾಸಕರು ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಅವರ ಕರ್ತವ್ಯ ನಿರ್ವಹಿಸಲಿ, ವಿರೋಧ ಪಕ್ಷ, ಜನಪರ ಸಂಘಟನೆಗಳಾಗಿ ನಾವು ಜನರ ಪರವಾಗಿ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ರಸ್ತೆ ಉಳಿಸಲು ನಡೆಯುವ ಈ ಹೋರಾಟದೊಂದಿಗೆ ಎಲ್ಲರೂ ಕೈ ಜೋಡಿಸುವಂತೆ ಪೂಂಜಾಲಕಟ್ಟೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿ ಯ ಸಲಹೆಗಾರರಾದ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News