ಅಂಗಾಂಗ ದಾನದ ಮಹತ್ವದ ಬಗ್ಗೆ ಜನ ಜಾಗೃತಿ ಅಗತ್ಯ: ಡಾ.ಸದಾನಂದ ಪೂಜಾರಿ
ಮಂಗಳೂರು: ಅಂಗಾಂಗ ದಾನದ ಬಗ್ಗೆ ಜನರಲ್ಲಿರುವ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಿ, ಅಂಗಾಂಗ ದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಎಂದು ವೆನ್‌ಲಾಕ್ ಆಸ್ಪತ್ರೆಯ ಯೂರೋಲಜಿಸ್ಟ್ ಡಾ. ಸದಾನಂದ ಪೂಜಾರಿ ತಿಳಿಸಿದ್ದಾರೆ. ಸದಾನಂದ ಪೂಜಾರಿ ಮಾತನಾಡಿ, ನಾವು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಬೇಕಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಮಾಡಲು ಮುಂದೆ ಬರಬೇಕು ಅದಕ್ಕಾಗಿ ಜಾಗೃತಿ ಅಗತ್ಯ ಎಂದರು.
ನಗರದ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ನಡೆದ ಅಂಗಾಂಗ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗಾಂಗ ದಾನ ಮಾಡಿದರೆ ಇನ್ನೊಬ್ಬರ ಬದುಕಿಗೆ ಬೆಳಕಾಗಬಹುದು. ನಾವು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು.
ಕರ್ನಾಟಕದಲ್ಲಿ 1994ರ ಮೊದಲು ಅಂಗಾಂಗ ದಾನದ ಬಗ್ಗೆ ಕಟ್ಟುನಿಟ್ಟಿನ ನಿಯಮ ಇರಲಿಲ್ಲ. ಕಿಡ್ನಿ ಮಾರಾಟದ ಹಗರಣ ಕರ್ನಾಟಕದಲ್ಲಿ ಬೆಳಕಿಗೆ ಬಂದ ಬಳಿಕ ಅಂಗಾಂಗ ದಾನಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಂಡಿತು. ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳೆಯೊಬ್ಬರು ಖರ್ಚಿಗಾಗಿ ಕಿಡ್ನಿ ಮಾರಿದ್ದರು. ಆದರೆ ಚುನಾವಣೆಯಲ್ಲಿ ಸೋತ ಆಕೆ ತನ್ನ ಹಣವು ಹೋಯಿತು , ಕಿಡ್ನಿಯೂ ಹೋಯಿತು ಎಂಬ ನೋವನ್ನು ವ್ಯಕ್ತಪಡಿಸಿದ್ದರು. ಬಳಿಕ ಕಿಡ್ನಿ ಮಾರಾಟ ಹಗರಣ ಬೆಳಕಿಗೆ ಬಂತು ಎಂದು ಅವರು ತಿಳಿಸಿದರು.
ಇಂಡಿಯಾನಾ ಆಸ್ಪತ್ರೆಯ ಚೀಫ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯೂಸುಫ್ ಕುಂಬ್ಳೆ ಮಾತನಾಡಿ 2019ರಲ್ಲಿ ಮೊದಲ ಬಾರಿಗೆ ಇಂಡಿಯಾನಾ ಆಸ್ಪತ್ರೆ ಯಲ್ಲಿ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅಂಗಾಂಗ ದಾನದ ಮೂಲಕ ಇನ್ನೊಬ್ಬರಿಗೆ ಮರು ಜೀವನ ಪಡೆಯಲು ಅನುವು ಮಾಡಿ ಕೊಡುತ್ತದೆ. ಎಂದು ಹೇಳಿದರು.
ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಆ್ಯಂಡ್ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ತಜ್ಞ ವೈದ್ಯ ಡಾ. ಪ್ರದೀಪ್ ಕೆ.ಜೆ, ಯುರೋಲಜಿಸ್ಟ್ ಡಾ. ಮುಜೀಬ್ ರಹಿಮಾನ್ ಈ ಸಂದರ್ಭದಲ್ಲಿ ಮಾತನಾಡಿದರು.
ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷರು ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅಲಿ ಕುಂಬ್ಳೆ, ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ.ಅನ್ವಿತಾ ವರ್ಮುಡಿ ,ಡಯಬಿಟೊಲೋಜಿಸ್ಟ್ ಡಾ. ಶ್ರವಣ್ ಆರ್ ಶಾನ್‌ಭಾಗ್ , ಸಿಇಒ ಪ್ರಶಾಂತ್ ದೇಸಾಯಿ ಉಪಸ್ಥಿತರಿದ್ದರು.
ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ಬಾಲಕ ಯಶ್‌ರಾಜ್ ಅಂಗಾಂಗ ದಾನ ಮಾಡಿದ ಕುಟುಂಬದ ಪರವಾಗಿ ಯಶ್‌ರಾಜ್ ಅತ್ತೆ ವನಜಾ ಅವರನ್ನು ಸನ್ಮಾನಿಸಲಾಯಿತು. ಡಾ. ವಿಶ್ವನಾಥ ಅವರು ಸನ್ಮಾನಿತರ ವಿವರ ನೀಡಿದರು. ಲವೀನಾ ಮತ್ತು ಪದ್ಮಾ ಅವರನ್ನು ಅಭಿನಂದಿಸಲಾಯಿತು.
ಕ್ಲಿನಿಕಲ್ ಡಯೆಟಿಶಿಯನ್ ಸಾಕ್ಷಾ.ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ನೃತ್ಯ ಮತ್ತು ಮೈಮ್ ಪ್ರದರ್ಶನವನ್ನು ನೀಡಿದರು.