ಅಪ್ರಾಪ್ತರನ್ನು ರಾಜಕೀಯಕ್ಕೆ ಬಳಸುವುದು ಸರಿಯೇ? | ದ.ಕ. ಬಿಜೆಪಿ ಅಭ್ಯರ್ಥಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ
ಮಂಗಳೂರು : ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕೇಸರಿ ಶಾಲು ಹಾಕಿಕೊಂಡ ಮಕ್ಕಳ ಜತೆ ನಿಂತುಕೊಂಡ ಫೋಟೋ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಆಕ್ಷೇಪವೆತ್ತಿದ್ದು, ಮಕ್ಕಳನ್ನು ರಾಜಕೀಯಕ್ಕೆ ಬಳಸುವುದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಫೋಟೋದಲ್ಲಿ ಬೃಜೇಶ್ ಅವರ ಜತೆ ಹತ್ತು ಮಂದಿ ಕೇಸರಿ ಶಾಲು ಹಾಕಿಕೊಂಡು ನಿಂತಿದ್ದಾರೆ. ಆ ಪೈಕಿ ಕನಿಷ್ಠ ಆರೇಳು ಮಂದಿ ಅಪ್ರಾಪ್ತರಂತೆ ಕಾಣಿಸುತ್ತಿದ್ದಾರೆ. ಚಿತ್ರಕ್ಕೆ ‘ಫೌಜೀಸ್ ಪಲ್ಟನ್’ ಎಂದು ಶೀರ್ಷಿಕೆ ಹಾಕಿರುವ ಬೃಜೇಶ್ ಅವರು ಹ್ಯಾಶ್‌ಟ್ಯಾಗ್ 'ಪ್ರಚಾರಪಯಣ', 'ದಕ್ಷಿಣ ಕನ್ನಡ' ಎಂದು ಖುದ್ದು ಬರೆದುಕೊಂಡಿದ್ದಾರೆ. ಮಕ್ಕಳನ್ನು ಹೀಗೆ ಚುನಾವಣಾ ಪ್ರಚಾರಕ್ಕೆ ಬಳಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅಲ್ಲೇ ಕೆಲವರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೆನ್ನಿಡಿಸೋಜಾ, ‘ಮಕ್ಕಳನ್ನು ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಚುನವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ”, ಎಂದು ಹೇಳಿದ್ದಾರೆ.