ಅಧಿಕಾರದ ದುರಾಸೆಗೆ ಪ್ರಧಾನಿ ಮೋದಿಯಿಂದ ರಾಹುಲ್ ನಿಂದನೆ: ರಮಾನಾಥ ರೈ

Update: 2023-10-07 07:59 GMT

ಮಂಗಳೂರು, ಅ.7: ದ್ವೇಷದ ರಾಜಕಾರಣದ ವಿರುದ್ಧ ಭಾರತ್ ಜೋಡೋ ಯಾತ್ರೆಯ ಮೂಲಕ ಪ್ರೀತಿಯನ್ನು ಹಂಚುವ ರಾಹುಲ್ ಗಾಂಧಿ ವಿರುದ್ಧ ಅಧಿಕಾರದ ದುರಾಸೆಯಿಂದ ಪ್ರಧಾನಿ ಮೋದಿಯವರು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಇದು ಖಂಡನೀಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಎದುರು ಶನಿವಾರ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಧಾನಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆಂದು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದ್ವೇಷದ ವಿರುದ್ಧ ಪ್ರೀತಿಯನ್ನು ಹಂಚುತ್ತಿರುವ ರಾಹುಲ್ ಅವರಲ್ಲಿ ನಾವು ರಾಮನ ಗುಣಗಳನ್ನು ಕಾಣುತ್ತಿದ್ದೇವೆ. ಅಂತಹ ನಾಯಕನನ್ನು ಈ ಹಿಂದೆ ಸಂಸತ್ತಿನಿಂದ ಹೊರಹಾಕುವುದು ಸೇರಿದಂತೆ ಬಹಳಷ್ಟು ರೀತಿಯಲ್ಲಿ ಅವಮಾನಿಸುವ ಕೃತ್ಯ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ನ ಪ್ರತಿಯೊಬ್ಬ ಕಾರ್ಯಕರ್ತ ವಿರೋಧಿಸಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಜನರ ಜತೆ ಬೆರೆಯುವ ರೀತಿ, ಅವರಿಗೆ ಜನರಿಂದ ಸಿಗುತ್ತಿರುವ ಪ್ರೀತಿಯಿಂದ ಪ್ರಧಾನಿ ಮೋದಿಯವರು ರಾಹುಲ್ ಗಾಂಧಿ ಎಂದರೆ ನಿದ್ದೆಯಲ್ಲೂ ಭಯ ಪಡುತ್ತಾರೆ ಎಂದರು.

ಕೇಂದ್ರದಲ್ಲಿ ಬಿಜೆಪಿಗೆ ಕೇವಲ ಏಳು ತಿಂಗಳು ಮಾತ್ರ ಅಧಿಕಾರದ ಆಯಸ್ಸು. ಇಂಡಿಯಾ ಒಕ್ಕೂಟ ಜನಪ್ರಿಯತೆ ಗಳಿಸುತ್ತಿದ್ದು, ಮುಂದೆ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬರಲಿದೆ. ಆಗ 10 ವರ್ಷಗಳಲ್ಲಿ ಮೋದಿ ಸರಕಾರದ ಕರ್ಮಕಾಂಡ ಬಯಲಾಗುವ ಭಯ ಪ್ರಧಾನಿ ಮೋದಿಯವರನ್ನು ಕಾಡುತ್ತಿದೆ. ಅವರ ಮಾತುಗಳಲ್ಲಿಯೇ ರಾವಣನ ಗುಣ ಯಾರಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಮೋದಿ ಅವರ ಮಾತಿನ ಬಾಣ ಅವರಿಗೇ ವಾಪಾಸಾಗಲಿದೆ ಎಂದು ಅವರು ಹೇಳಿದರು.

ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವನ್ ಡಿಸೋಜಾ, ನಾಯಕರಾದ ಇಬ್ರಾಹೀಂ ಕೋಡಿಜಾಲ್, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಶಾಲೆಟ್ ಪಿಂಟೋ, ಹರಿನಾಥ್, ಪ್ರಕಾಶ್ ಸಾಲ್ಯಾನ್, ಲ್ಯಾನ್ಸಿಲಾಟ್ ಪಿಂಟೋ, ನವೀನ್ ಡಿಸೋಜಾ, ಅಬ್ದುಲ್ ಲತೀಫ್, ಸಂಶುದ್ದೀನ್, ವಿಶ್ವಾಸ್ ದಾಸ್, ಪದ್ಮರಾಜ್, ಮುಹಮ್ಮದ್ ಮೋನು, ಟಿ.ಕೆ. ಸುಧೀರ್, ಅಬ್ದುಲ್ ಸಲೀಂ, ಪುರುಷೋತ್ತಮ ಚಿತ್ರಾಪುರ, ನೀರಜ್ ಪಾಲ್, ಸದಾಶಿವ ಶೆಟ್ಟಿ, ಅಬ್ಬಾಸ್ ಅಲಿ, ಸುಹಾನ್ ಆಳ್ವ, ಅಶೋಕ್ ಡಿ.ಕೆ., ಅಪ್ಪಿ, ಮಂಜುಳಾ ನಾಯಕ್, ಶಶಿಕಲಾ ಕದ್ರಿ, ಶಾಂತಲಾ ಗಟ್ಟಿ, ಕೇಶವ ಮರೋಳಿ, ಬಶೀರ್ ಬೈಕಂಪಾಡಿ, ತಾರನಾಥ್ ಮೊದಲಾದರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News