ಸಮುದ್ರದ ಮಧ್ಯೆ ದೋಣಿಯಲ್ಲಿ ಅಸ್ವಸ್ಥಗೊಂಡ ಮೀನುಗಾರನ ರಕ್ಷಣೆ: ಕೋಸ್ಟ್ ಗಾರ್ಡ್ ಕಾರ್ಯಾಚರಣೆ
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಮೀನುಗಾರರೊಬ್ಬರು ನವಮಂಗಳೂರು ಬಂದರಿನಿಂದ 36 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಅಸ್ವಸ್ಥಗೊಂಡಾಗ ಕೋಸ್ಟ್ ಗಾರ್ಡ್ ನೆರವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಗಳವಾರ ವರದಿಯಾಗಿದೆ.
ಅಸ್ವಸ್ಥಗೊಳಗಾದ ಸ್ಥಳೀಯ ಮೀನುಗಾರ ವಸಂತ್ ಎಂಬರು ಇದೀಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿ ದ್ದಾರೆ. ಬೇಬಿ ಮೇರಿ 4 ಎಂಬ ಮೀನುಗಾರಿಕಾ ದೋಣಿಯಲ್ಲಿ ಸ್ಥಳೀಯ ಮೀನುಗಾರ ವಸಂತ್ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದರು. ಮಧ್ಯಾಹ್ನ 3:20ರ ಹೊತ್ತಿಗೆ ಅವರಿಗೆ ಎದೆ ನೋವು, ಉಸಿರಾಟದ ತೊಂದರೆ ಕಾಣಿಸಿ ಕೊಂಡಿತು. ಈ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್‌ಗೆ ತುರ್ತು ಸಹಾಯಕ್ಕಾಗಿ ಸಂಪರ್ಕಿಸಲಾಗಿತ್ತು.
ಅಸ್ವಸ್ಥಗೊಂಡ ವಸಂತ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ಮೀನುಗಾರಿಕಾ ದೋಣಿ ಸುಲ್ತಾನಿಯಾ ಮೂಲಕ ಮಾಹಿತಿ ಪಡೆದ ಕರಾವಳಿ ಕಾವಲು ಪಡೆಯ ಜಿಲ್ಲಾ ಕೇಂದ್ರ ತಕ್ಷಣ ವಸಂತನ ರಕ್ಷಣೆಗೆ ತೆರಳಲು ಅಗತ್ಯದ ವ್ಯವಸ್ಥೆ ಮಾಡಿತ್ತು. ಸಮುದ್ರದಲ್ಲಿ ಗಸ್ತಿನಲ್ಲಿದ್ದ ಭಾರತೀಯ ಕೋಸ್ಟ್ ಗಾರ್ಡ್‌ನ ಇಂಟರ್ಸೆಪ್ಟರ್ ಬೋಟ್ ಸಿ-446 ಮೂಲಕ ದೋಣಿಯತ್ತ ತೆರಳಿದ ತಟ ರಕ್ಷಣಾ ಪಡೆಯು ಅಸ್ವಸ್ಥಗೊಂಡಿದ್ದ ವಸಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿತು.
ಮಂಗಳೂರು ಮೀನುಗಾರಿಕಾ ಇಲಾಖೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಸಹಯೋಗದಲ್ಲಿ ಜೆಟ್ಟಿಯಲ್ಲಿ ಸಾಗರ ರಕ್ಷಣಾ ಉಪ ಕೇಂದ್ರ (ಎಂಆರ್‌ಎಸ್‌ಸಿ ) ತುರ್ತು ವೈದ್ಯಕೀಯ ಸೇವೆಗಳನ್ನು ತ್ವರಿತವಾಗಿ ವ್ಯವಸ್ಥೆಗೊಳಿಸಿತ್ತು. ಬಳಿಕ ಅವರನ್ನು ಹೆಚ್ಚಿನ ಚಿಕಿತೆಗಾಗಿ ನಗರದ ಖಾಸಗಿ ಆಸ್ಪತ್ರ್ರೆಗೆ ದಾಖಲಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.