ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆ ಪ್ರಕರಣ | ದಂಧೆಕೋರರ ಜೊತೆ ವಿಶೇಷ ತನಿಖಾ ತಂಡ ಶಾಮೀಲು: ಮುನೀರ್‌ ಕಾಟಿಪಳ್ಳ ಆರೋಪ

Update: 2024-06-27 09:36 GMT

ಮಂಗಳೂರು: ಪಾವೂರು, ಉಳಿಯ ದ್ವೀಪದಲ್ಲಿ ನಡೆದಿರುವ ಮರಳುಗಾರಿಕೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿ, ಮರಳು ದಂಧೆಕೋರರ ಜೊತೆ ಶಾಮೀಲಾಗಿ ಸುಳ್ಳು ವರದಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಪಾವೂರು, ಉಳಿಯ ದ್ವೀಪದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಬರಿಗಣ್ಣಿಗೆ ಕಾಣುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ "ಪರಿಶೀಲನೆ" ಯಲ್ಲಿ ಸಾಮಾನ್ಯ ಮರಳುಗಾರಿಕೆ ನಡೆದಿರುವ ಕುರುಹುಗಳೂ ಕಂಡು ಬಂದಿಲ್ಲವಂತೆ. ಸ್ಥಳೀಯ ಮಾಧ್ಯಮಗಳು ಸ್ಥಳಕ್ಕೆ ಹೋಗಿ ಖುದ್ದು ಚಿತ್ರೀಕರಿಸಿ ಪ್ರಸಾರ ಮಾಡಿದ "ವೀಡಿಯೋ ದೃಶ್ಯಗಳು ಹಳೆಯವು" ಎಂದು ಇಲಾಖೆಯ ತನಿಖೆಯಿಂದ ಗೊತ್ತಾಗಿದೆಯಂತೆ. ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಖುದ್ದು ಸ್ಥಳ ಪರಿಶೀಲನೆ ನಡೆಸಿದಾಗ ದ್ವೀಪದ ದೊಡ್ಡ ಭಾಗ ನದಿಯ ಪಾಲಾಗಿರುವುದು, ದ್ವೀಪದ ಭೂಭಾಗ ಕಿರಿದಾಗಿರುವುದು ಕಂಡು ಬಂದಿತ್ತು. ಆದರೆ, 'ಹಿರಿಯ ಭೂ ವಿಜ್ಞಾನಿ ಹಾಗೂ ಅವರ ತಾಂತ್ರಿಕ ಅಧಿಕಾರಿಗಳ ತಂಡ' ಪರಿಶೀಲನೆ ನಡೆಸಿದಾಗ, "30 ಎಕರೆ ಇರಬೇಕಾದ ದ್ವೀಪ 98 ಎಕರೆ ಆಗಿದೆ" ಎಂದು ವರದಿ ನೀಡಿದ್ದಾರೆ. ಇದಂತೂ ವಿಸ್ಮಯಕಾರಿಯಾಗಿದೆ. ಬಹುಷ, ಮರಳು ದಂಧೆಕೋರರು ಪರಿಸರದ ಮೇಲಿನ ಅಪಾರ ಕಾಳಜಿಯಿಂದ ಹೊರಗಡೆಯಿಂದ ಮರಳು ತಂದು ದ್ವೀಪದ ಸುತ್ತ ಸುರಿದು ದ್ವೀಪವನ್ನು ವಿಸ್ತರಿಸಿದ್ದಾರೆಯೆ, ಹೊರತು ಮರಳು ತೆಗೆದಿಲ್ಲ ಎಂದು ಗಣಿ ಇಲಾಖೆ ಹೇಳಲು ಹೊರಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೀಪವಾಸಿಗಳ ದೂರು, ಮಾಧ್ಯಮಗಳ ವರದಿಯ ಮೇರೆಗೆ ಪರಿಶೀಲನೆಗೆ ತೆರಳಿದ ಹಿರಿಯ ಭೂ ವಿಜ್ಞಾನಿ ಹಾಗೂ ತಾಂತ್ರಿಕ ಅಧಿಕಾರಿಗಳ ತಂಡವನ್ನೇ ಸರಕಾರ ತನಿಖೆಗೆ ಒಳಪಡಿಸಬೇಕು. ಪರಿಶೀಲನೆಗೆ ಉಳಿಯ ದ್ವೀಪಕ್ಕೆ ಆಗಮಿಸಿದ ತಂಡ, ದೂರುದಾರರಾದ ದ್ವೀಪವಾಸಿಗಳ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸುವ ಬದಲಿಗೆ, ಮರಳು ದಂಧೆಕೋರರ ದೋಣಿಯನ್ನು ಉಪಯೋಗಿಸಿ ದ್ವೀಪಕ್ಕೆ ತೆರಳಿದೆ, ಮರಳು ದಂಧೆಯವರ ಆತಿಥ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಈ ನಡವಳಿಕೆಗಳೇ ಗಣಿ ಇಲಾಖೆಯ ಭ್ರಷ್ಟತೆ, ಮರಳು ಮಾಫಿಯಾ ಜೊತೆಗಿನ ಶಾಮೀಲಾತಿಯನ್ನು ಎತ್ತಿತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳು ಪ್ರಸಾರ ಮಾಡಿದ ದ್ವೀಪದಲ್ಲಿ ಮರಳುಗಾರಿಕೆ ನಡೆಸುವ ದೃಶ್ಯಗಳು ಒಂದು ವಾರದಷ್ಟು ಇತ್ತೀಚೆಗೆ ದೈಜಿ ವರ್ಲ್ಡ್ ವಾಹಿನಿ ಚಿತ್ರೀಕರಿಸಿದ್ದಾಗಿದ್ದು, ಇದು ಹಳೆಯ ವೀಡಿಯೋ ಎಂದು ಇಲಾಖೆ ಪ್ರಕಟನೆ ನೀಡಿರುವುದು ಅತ್ಯಂತ ನಿರ್ಲಜ್ಜ ನಡೆಯಾಗಿದೆ. ಈ ಚಿತ್ರೀಕರಣದ ಎಲ್ಲಾ ದಾಖಲೆಗಳು ಮಾಧ್ಯಮ ಕಚೇರಿಯಲ್ಲಿ ಲಭ್ಯ ಇದ್ದು, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ. ಇನ್ನು, ಈಗಲೂ ಪಾವೂರು ಸುತ್ತಲೂ ಸಹಿತ, ನೇತ್ರಾವತಿ, ಫಲ್ಗುಣಿ ನದಿಯಲ್ಲಿ ಮರಳುಗಾರಿಕೆಯ ದೋಣಿಗಳು ನೂರಾರು ಸಂಖ್ಯೆಯಲ್ಲಿ ಕಾಣ ಸಿಗುತ್ತವೆ, ಕತ್ತಲಾಗುತ್ತಲೇ, ಈ ದೋಣಿಗಳು ಜೀವತಳೆದು ಮರಳುಗಾರಿಕೆಯಲ್ಲಿ ತೊಡಗುತ್ತವೆ. ಮರಳುಗಾರಿಕೆಗೆ ಪೂರ್ಣ ನಿಷೇಧ ಇರುವ ಮಳೆಗಾಲದ ಅವಧಿಯಲ್ಲಿ ಈ ದೋಣಿಗಳಿಗೆ ನದಿಯಲ್ಲೇನು ಕೆಲಸ, ಗಣಿ ಇಲಾಖೆ ಈ ಕುರಿತು ಕ್ರಮಗಳನ್ನು ಯಾಕೆ ಜರುಗಿಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಈ ಪರಿಶೀಲನಾ ವರದಿ ಪಾವೂರು, ಉಳಿಯ ದ್ಚೀಪ ಹಾಗೂ ಅದರ ಸುತ್ತಲು ಅಕ್ರಮ ಮರಳುಗಾರಿಕೆ ನಡೆಸುವ ದಂಧೆಕೋರರು, ಹಾಗೂ ಅವರೊಂದಿಗೆ ಶಾಮೀಲಾಗಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ರಕ್ಷಿಸುವ ನಾಚಿಕೆಗೇಡಿನ ಯತ್ನವಲ್ಲದೆ ಮತ್ತೇನಲ್ಲ. ಈ ನಡೆಯನ್ನು ಬಲವಾಗಿ ಖಂಡಿಸುತ್ತೇವೆ. ಮರಳು ದಂಧೆಕೋರರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಇರುವುದನ್ನೂ ಇದು ಎತ್ತಿ ತೋರಿಸುತ್ತದೆ. ಉಳಿಯ ದ್ವೀಪದಲ್ಲಿ ನಡೆದಿರುವ ಈ ವರಗಿನ ಅಕ್ರಮ ಮರಳು ಗಾರಿಕೆಯ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳಲ್ಲಿರುವ ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸಿ ತನಿಖೆಗೆ ಆದೇಶಿಸಬೇಕು, ಈಗ ಸ್ಥಳ ಪರಿಶೀಲನೆ ನಡೆಸಿದ ಗಣಿ ಇಲಾಖೆಯ ಅಧಿಕಾರಿಗಳನ್ನೂ ಪ್ರತ್ಯೇಕ ತನಿಖೆಗೆ ಒಳಪಡಿಸಬೇಕು, ಜಿಲ್ಲಾಧಿಕಾರಿಗಳು ನಾವು ಈಗಾಗಲೇ ಮಾಡಿರುವ ಮನವಿಯನ್ನು ಮನ್ನಿಸಿ ಉಳಿಯ ದ್ವೀಪಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಬಲವಾಗಿ ಆಗ್ರಹಿಸುತ್ತವೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News