ಸೋಮೇಶ್ವರ : ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ
ಉಳ್ಳಾಲ : ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ನಡೆದಿದೆ.
ಸೋಮೇಶ್ವರ ಪರಿಜ್ಞಾನ ಕಾಲೇಜಿನ ಯಶ್ವಿತ್ ಹಾಗೂ ಯುವರಾಜ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.
ಘಟನೆಯ ಹಿನ್ನಲೆಯಲ್ಲಿ ಸೋಮೇಶ್ವರ ಸಮುದ್ರ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಜಲು ತೆರಳದಂತೆ ಉಳ್ಳಾಲ ಠಾಣಾಧಿಕಾರಿ ಹೆಚ್. ಎನ್. ಬಾಲಕೃಷ್ಣ ಸೂಚಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಮಂದಿ ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಹೋದ ಬಳಿಕ ಸೋಮೇಶ್ವರ ಕಡಲ ಕಿನಾರೆಗೆ ತೆರಳಿದ್ದರು. ಈ ವೇಳೆ ಇಬ್ಬರು ನೀರಿಗೆ ಇಳಿದು ಆಟವಾಡಲು ಶುರುಮಾಡಿದಾಗ ಅವರು ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ. ಹುಡುಕಾಟ ನಡೆಯುತ್ತಿದೆ. ಸೋಮೇಶ್ವರ ಪ್ರವಾಸಿ ತಾಣವಾಗಿದ್ದು, ಬೀಚ್ ಆಗಿರುವುದಿಲ್ಲ. ಇಲ್ಲಿ ಸ್ಥಾನ ಮಾಡಲು ಈಜಾಡಲು ಅವಕಾಶ ಇರುವುದಿಲ್ಲ. ಸೋಮೇಶ್ವರ ದೇವಸ್ಥಾನ ವೀಕ್ಷಣೆ ಜತೆಗೆ ಪ್ರವಾಸಿ ತಾಣವನ್ನು ದೂರದಿಂದ ವೀಕ್ಷಿಸಿ ಬರಬೇಕಾಗಿದೆ. ಆದರೆ ಕೆಲವು ಬಾರಿ ವಿದ್ಯಾರ್ಥಿಗಳು ಸೋಮೇಶ್ವರ ತಾಣ ವೀಕ್ಷಿಸಿದ ಬಳಿಕ ಸಮುದ್ರಕ್ಕೆ ಇಳಿಯುವುದರಿಂದ ಇಂತಹ ಘಟನೆ ನಡೆಯುತ್ತಿವೆ. ಇನ್ನು ಸೋಮೇಶ್ವರದಲ್ಲಿ ಸಮುದ್ರಕ್ಕಿಳಿಯುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಳ್ಳಾಲ ಇನ್ಸ್‍ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.