ಜಾತ್ರೆ ಸಂತೆ ಜಾಗಕ್ಕೆ ಏಲಂ ನಿಲ್ಲಿಸಲು ಹೋರಾಟ; ಆ. 19ರಂದು ಹಿಂದೂ ವ್ಯಾಪಾರಸ್ಥರ ಸಂಘ ಉದ್ಘಾಟನೆ

Update: 2023-07-22 09:35 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಜು. 22: ರಾಜ್ಯದಲ್ಲಿ ಹಿಂದೂ ದೇವಸ್ಥಾನಗಳಲ್ಲಿ ನಡೆಯುವ ಜಾತ್ರಾ ಸಂದರ್ಭ ಸಂತೆ ವ್ಯಾಪಾರಸ್ಥರಿಗೆ ಜಾಗಕ್ಕಾಗಿ ಏಲಂ ಹಾಕುವ ಪದ್ಧತಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿದ್ದು, ವರ್ಷದಿಂದ ವರ್ಷಕ್ಕೆ ಇದು ಏರಿಕೆಯಾಗುವುದರಿಂದ ಬಡ ಸಂತೆ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಆ ಏಲಂ ವ್ಯವಸ್ಥೆ ನಿಲ್ಲಿಸುವುದು ತಮ್ಮ ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಜಾತ್ರಾ ಹಿಂದೂ ವ್ಯಾಪಾರಸ್ಥರ ಸಂಘ ತಿಳಿಸಿದೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮಹೇಶ್, ಆಗಸ್ಟ್ 19ರಂದು ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

ರಾಜ್ಯದಲ್ಲಿ ಸುಮಾರು 60 ಸಾವಿರ ಹಿಂದೂ ಕುಟುಂಬಗಳು ಜಾತ್ರಾ ವ್ಯಾಪಾರ ನಡೆಸುತ್ತಿದ್ದಾರೆ. ಇದರಲ್ಲಿ ಶೇ. 90ರಷ್ಟು ಬಿಪಿಎಲ್ ಕುಟುಂಬದವರು. ವರ್ಷದಲ್ಲಿ ಆರು ತಿಂಗಳು ಮಾತ್ರ ಜಾತ್ರೆ ವ್ಯಾಪಾರ ಇರುತ್ತದೆ. ವ್ಯಾಪಾರವು ಹಿಂದೂ ದೇವಸ್ಥಾನದಲ್ಲಿ ಇರುವುದರಿಂದ ಸಂಘದ ಹೆಸರು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಎಂದು ಇಡಲಾಗಿದೆಯೇ ಹೊರತು ಯಾವುದೇ ಜಾತಿ ಅಥವಾ ರಾಜಕೀಯ ಉದ್ದೇಶ ಹೊಂದಿಲ್ಲ ಎಂದರು.

ಜಾತ್ರೆಯಲ್ಲಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವುದು, ಜಾತ್ರಾ ಜಾಗದಲ್ಲಿ ಸಮಸ್ಯೆ ಆದಾಗ ಅದನ್ನು ನಿವಾರಿಸುವುದು. ಬಡ ವ್ಯಾಪಾರಸ್ಥರಿಗೆ ನೆರವು ನೀಡುವುದು, ಸಂಘದ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿ ಸದಸ್ಯರಿಗೆ ಬಡ್ಡಿ ರಹಿತ ಸಾಲಕ್ಕಾಗಿ ಪ್ರಯತ್ನಿಸುವುದು ಸಂಘ ಸ್ಥಾಪನೆಯ ಇತರ ಪ್ರಮುಖ ಉದ್ದೇಶಗಳು ಎಂದು ಅವರು ಹೇಳಿದರು.

ಸಂಘದ ಉದ್ಘಾಟನೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಸಿಟಿ ರವಿ ಅವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಣೇಶ್, ಪ್ರಮೀಳಾ, ರಾಜೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News