ಡಿ.21ರಂದು ಕಾರ್ಮಿಕ ಪರಿಷತ್, ವ್ಯಾಪಾರಿಗಳ ಒಕ್ಕೂಟದಿಂದ ಪ್ರತಿಭಟನೆ

Update: 2023-12-20 02:33 GMT

Photo: twitter.com/MangaloreCity

ಮಂಗಳೂರು, ಡಿ.19: ನಗರದ ಸ್ಟೇಟ್‌ಬ್ಯಾಂಕ್ ಸರ್ಕಲ್‌ ನಿಂದ ಸಿಟಿ ಬಸ್ಸುಗಳನ್ನು ಸರ್ವಿಸ್ ಬಸ್ಸು ನಿಲ್ದಾಣಕ್ಕೆ ಸ್ಥಳಾಂತರಿಸಿದ ಕ್ರಮ ಕಾನೂನುಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರ ಎಂದು ಆರೋಪಿಸಿರುವ ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಹಾಗೂ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಡಿ. 21ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದ ವಿಧಾನ ಪರಿಷತ್‌ ನ ಮಾಜಿ ಸದಸ್ಯ, ಕಾರ್ಮಿಕ ನಾಯಕ ಐವನ್ ಡಿಸೋಜಾ, ಬಸ್ಸು ಮಾಲರ ಲಾಬಿಗೆ ಮಣಿದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಸಿಟಿ ಬಸ್ಸು, ಎಕ್ಸ್‌ಪ್ರೆಸ್ ಹಾಗೂ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ಗಳಿಗೆ ಒಂದೇ ನಿಲ್ದಾಣದಲ್ಲಿ ಸ್ಥಳಾವಕಾಶ ಮಾಡುವ ನಿರ್ಧಾರ ಕೈಗೊಂಡಿದೆ. ಇದನ್ನು ಆಕ್ಷೇಪಿಸಿ ಈಗಾಗಲೇ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಜನಸ್ಪಂದನ ಸಭೆಯಲ್ಲೂ ಈ ಬಗ್ಗೆ ಗಮನ ಸೆಳೆಯಲಾಗಿತ್ತು. ಇದೀಗ ಡಿ. 21ರಂದು ಬೆಳಗ್ಗೆ 10.30ಕ್ಕೆ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದರು.

ಈ ಪ್ರತಿಭಟನೆ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದ್ದು, ಈ ಬಸ್ಸು ನಿಲ್ದಾಣದ ಸ್ಥಳಾಂತರದಿಂದ ಇಲ್ಲಿನ ಅಂಗಡಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ  ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಯ ಶೆಟ್ಟಿ, ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್, ಮುಖ್ಯ ಕಾರ್ಯದರ್ಶಿ ಹಮೀದ್ ಷಾ, ಗೌರವ ಸಲಹೆಗಾರ ಮುಹಮ್ಮದ್ ಆಸೀಫ್, ಕೋಶಾಧಿಕಾರಿ ನವೀನ್ ಡಿಸೋಜಾ, ಸಮಿತಿ ಸದಸ್ಯರಾದ ರಘು ನಾಯಕ್, ಕಾರ್ಯದರ್ಶಿ ನಾಗರಾಜ್, ನ್ಯಾಯವಾದಿ ಮೋಹನ್‌ದಾಸ್ ರೈ, ಸ್ಥಳೀಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಯು.ಎಚ್. ಖಾಲಿದ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News