ಹರಿಹರ | ಪೂಜೆಯ ಸೋಗಿನಲ್ಲಿ ಚಿನ್ನ ದೋಚಿದ ಪ್ರಕರಣ: ಇಬ್ಬರ ಬಂಧನ

ಹರಿಹರ : ಆರ್ಥಿಕ ಸಂಕಷ್ಟದಿಂದ ನರಳುತ್ತಿರುವವರ ಮನೆಗೆ ಪೂಜೆ ಮಾಡುವವರ ವೇಷದಲ್ಲಿ ಬಂದು ಮನೆಯಲ್ಲಿ ಪೂಜೆ ನಡೆಸುವ ನೆಪದಲ್ಲಿ ಪೂಜೆಗಿಟ್ಟಿದ್ದ ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಸ್ಮಾಯಿಲ್ ಝಬೀವುಲ್ಲಾ (30), ಒಡಿಶಾದಲ್ಲಿ ಟೈಲರ್ ಕೆಲಸ ಮಾಡುವ ರುಕ್ಸಾನ ಬೇಗಂ (30)ಬಂಧಿತ ಆರೋಪಿಗಳು.
ಫೆ.11ರಂದು ತಾಲೂಕಿನ ಬನ್ನಿಕೊಡು ಗ್ರಾಮದ ಶಶಿಕಲಾ ರಮೇಶ್ ಎಂಬವರ ಮನೆಗೆ ಸಂಜೆಯ ಸಮಯದಲ್ಲಿ ಈ ಇಬ್ಬರು ಆರೋಪಿಗಳು ಬಂದು ನಿಮ್ಮ ಮನೆಯಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ, ನಿಮ್ಮ ಆರ್ಥಿಕ ಸಮಸ್ಯೆಗೆ ನಾವು ಪರಿಹಾರ ನೀಡುತ್ತೇವೆ. ನಿಮ್ಮ ಮನೆಯಲ್ಲಿರುವ ಬೆಳ್ಳಿ, ಚಿನ್ನಾಭರಣಗಳನ್ನು ಪೂಜೆಯಲ್ಲಿಡಬೇಕೆಂದು ಪೂಜೆ ಮಾಡುವವರ ಸೋಗಿನಲ್ಲಿ ಬಂದು ತಿಳಿಸಿದ್ದಾರೆ. ಪೂಜೆಗಿಟ್ಟಿದ್ದ 1.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಬನ್ನಿಕೋಡು ಗ್ರಾಮದ ಶಶಿಕಲಾ ರಮೇಶ್ ನೀಡಿದ ದೂರು ನೀಡಿದ್ದರು. ಇದರನ್ವಯ ಪ್ರಕರಣ ದಾಖಲಿಸಿಕೊಂಡು ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ನಡೆಸಿದ್ದರು.
ಗ್ರಾಮಾಂತರ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಪಿಎಸೈ ಮಂಜುನಾಥ ಎಸ್.ಕುಪ್ಪೇಲೂರು, ತನಿಖಾಧಿಕಾರಿ ಮಹದೇವ ಸಿದ್ದಪ್ಪ ಭತ್ತೆ 5 ದಿನ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳನ್ನು ಒಡಿಸ್ಸಾ ರಾಜ್ಯದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹರಿಹರ ಗ್ರಾಮಾಂತರದಲ್ಲಿ 2 ಪ್ರಕರಣ, ದಾವಣಗೆರೆ ಅಜಾದ್ ನಗರದಲ್ಲಿ 1 ಪ್ರಕರಣದಲ್ಲಿ ಇವರ ಹೆಸರು ಪತ್ತೆಯಾಗಿತ್ತು. ಬಂಧಿತರಿಂದ ಅಂದಾಜು 8.65 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿ ಆಭರಣ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.