ದಾವಣಗೆರೆ | ಅಪ್ರಾಪ್ತ ವಯಸ್ಸಿನ ಬಾಲಕನಿಂದ ಬೈಕ್ ಚಾಲನೆ; ವಾಹನ ಮಾಲಕಿಗೆ 25 ಸಾವಿರ ರೂ. ದಂಡ

ಸಾಂದರ್ಭಿಕ ಚಿತ್ರ
ದಾವಣಗೆರೆ : ಅಪ್ರಾಪ್ತ ವಯಸ್ಸಿನ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಮಾಲಕಿಗೆ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.
ಗಡಿಯಾರ ಕಂಬದ ಬಳಿ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ, ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸುತ್ತಿದ್ದ ಆ್ಯಕ್ಟಿವಾ ಹೊಂಡ ಬೈಕ್ ಅನ್ನು ವಶಪಡಿಸಿಕೊಂಡು ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಬೈಕ್ ಮಾಲಕರಾದ ಮಮತ ಅವರ ಮೇಲೆ ದೋಷಾರೋಪ ಪತ್ರ ಸಲ್ಲಿಸಲಾಗಿತ್ತು. ಮಾಲಕರು ತಮ್ಮ ಬೈಕ್ಅನ್ನು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ನ್ಯಾಯಾಲಯ ಬೈಕ್ ಮಾಲಕರಿಗೆ 25,000 ರೂ.ಗಳ ದಂಡವನ್ನು ವಿಧಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಎಎಸ್ಪಿ ವಿಜಯಕುಮಾರ ಎಂ. ಸಂತೋಷ್, ಮಂಜುನಾಥ ಹಾಗೂ ನಗರದ ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ಟ್ರಾಫಿಕ್ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಉತ್ತರ ಸಂಚಾರ ಠಾಣೆ ಪಿಎಸ್ಸೈ ಜಯಶೀಲ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.