ದಾವಣಗೆರೆ | ಟೈರ್ ಸ್ಫೋಟಗೊಂಡು ಪಲ್ಟಿಯಾದ ಬೊಲೆರೋ ವಾಹನ: ಮೂವರು ಮೃತ್ಯು

Update: 2024-02-26 06:55 GMT

ದಾವಣಗೆರೆ, ಫೆ.26: ಚಲಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡಿದ್ದರಿಂದ ಬೊಲೆರೊ ವಾಹನವೊಂದು ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ದಾವಣಗೆರೆ ನಗರ ಹೊರವಲಯದ ಪಂಜಾಬಿ ಡಾಬಾ ಬಳಿಯ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮುಸ್ತಾನ್(50), ಎಸ್.ಟಿ.ವೀರಣ್ಣ(30) ಹಾಗೂ ಪೆದ್ದ ವೆಂಕಣ್ಣ(38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಐವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಓರ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಬೊಲೆರೊ ವಾಹನದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿಕಾಯಿ ಖರೀದಿಸಿ ತಮ್ಮೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತಡರಾತ್ರಿ ನಗರ ಹೊರವಲಯದ ಪಂಜಾಬಿ ಡಾಬಾ ಬಳಿ ತಲುಪಿದಾಗ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಬೊಲೆರೊ ವಾಹನ ಉರುಳಿಬಿದ್ದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News