ಮೊದಲು ನಿಮ್ಮ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಿ : ಯತ್ನಾಳ್, ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ತಿರುಗೇಟು
ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಪಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಲಿಷ್ಠವಾಗಿದೆ. ಬಿಜೆಪಿಯಲ್ಲಿ ಎಲ್ಲವನ್ನೂ ಸ್ವಚ್ಛ ಮಾಡುತ್ತೇನೆ ಎನ್ನುವ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲು ನಿಮ್ಮ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಶಿರಮಗೊಂಡನಹಳ್ಳಿಯಲ್ಲಿರುವ ಮಾಜಿ ಸಚಿವ ರವೀಂದ್ರನಾಥ ಅವರ ಮನೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದ ಬಳಿಕ ವಿನಃ ಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಬಿಟ್ಟು ಬರುವಾಗ ಯಡಿಯೂರಪ್ಪನವರನ್ನು ಇಂದ್ರ -ಚಂದ್ರ ಅಂತ ಹೊಗಳಿದಿರಿ. ಈಗ ಹಾದಿ ಬೀದಿಯಲ್ಲಿ ಮಾತನಾಡುವುದು ಎಷ್ಟು ಸರಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ಏನಾದರೂ ಸಮಸ್ಯೆ ಇದ್ದರೆ ರಾಷ್ಟ್ರೀಯ ನಾಯಕರಿಗೆ ದೂರು ನೀಡಿ. ಅದನ್ನು ಬಿಟ್ಟು ವಿನಾಕಾರಣ ಈ ರೀತಿ ಮಾತನಾಡುವುದು ಸರಿಯಲ್ಲ. ವಿಜಯಪುರದ ಶಾಸಕರು ಹಿಂದೂ ಹುಲಿ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಹಸಿರು ಟೋಪಿ ಹಾಕಿಕೊಂಡಿದ್ದು ನೆನಪಿಲ್ಲವೇ?. ಹಾಲಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡು ನೀವು ಗೆದ್ದಿರುವುದು. ಈಗ ನಿಮ್ಮ ಬೆಳವಣಿಗೆಗಾಗಿ ಹಿಂದುತ್ವವನ್ನು ಮುಂದಿಟ್ಟುಕೊಂಡಿದ್ದೀರಿ. ಬಿಜೆಪಿ ವಿರೋಧ ಪಕ್ಷವಾಗಿ ಆಯ್ಕೆಯಾಗಿದೆ. ಆದರೆ ಬಿಜೆಪಿಯಲ್ಲೇ ವಿರೋಧ ಪಕ್ಷಗಳು ಇರುವುದು ಬೇಡ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತದೆ. ಪಕ್ಷಕ್ಕೆ ಸಾಕಷ್ಟು ಹಾನಿಯಾಗುತ್ತಿದೆ ಎಂದರು.
ಪ್ರತಾಪ ಸಿಂಹ ‘ಪೇಪರ್ ಟೈಗರ್’: ಟಿಕೆಟ್ ತಪ್ಪಿದವರು, ಸೋತವರು ಕೂಡ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಕುಮಾರ್ ಬಂಗಾರಪ್ಪ ಕೂಡ ಸೊರಬದಲ್ಲಿ ಯಡಿಯೂರಪ್ಪನವರ ವಿರುದ್ಧ ಮೀಟಿಂಗ್ ಮಾಡಿದ್ದಾರೆ. ಸೊರಬದಲ್ಲಿ ಟಿಕೆಟ್ ನೀಡಿ ಚುನಾವಣೆಯಲ್ಲಿ ಸಾಕಷ್ಟು ಬೆಂಬಲ ನೀಡಿದ್ದು ಮಾಜಿ ಸಿಎಂ ಯಡಿಯೂರಪ್ಪನವರು. ಅಲ್ಲದೆ, ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿಗೆ ಯಾರು ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಗೆ ಜಿಎಂ ಸಿದ್ದೇಶ್ವರ ಸಂಸದರಾಗಿ ಜಿಲ್ಲೆಗೆ ನೀಡಿದ ಕೊಡುಗೆ ಏನು?. ಪತ್ನಿಗೆ ಟಿಕೆಟ್ ಕೊಡಿಸಿ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ. ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಹೇಗಿದೆ ಎನ್ನುವುದು ಗೊತ್ತಿದೆ. ನಿಮ್ಮ ವರ್ತನೆಯಿಂದ ನೀವು ಸೋತಿದ್ದೀರಿ ಎಂದು ಟೀಕಿಸಿದರು.
ಈ ವೇಳೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ , ಮಾಡಾಳ್ ವಿರೂಪಾಕ್ಷಪ್ಪ , ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಶಿವಯೋಗಿ ಸ್ವಾಮಿ ಸೇರಿದಂತೆ ಹಲವರು ಇದ್ದರು.