ದಾವಣಗೆರೆ | ಬಿಕಾಂ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಜೊತೆ ಮುದ್ರಿತ ಉತ್ತರ ನೀಡಿದ ವಿವಿ!

Update: 2024-08-06 16:55 GMT

PC : davangereuniversity

ದಾವಣಗೆರೆ : ದಾವಣಗೆರೆ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಹಲವು ಕಾಲೇಜುಗಳಲ್ಲಿ ಮಂಗಳವಾರ ನಡೆದ ಬಿಕಾಂ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಮುದ್ರಣಗೊಂಡ ಪತ್ರಿಕೆ ನೀಡಿರುವ ಘಟನೆ ವರದಿಯಾಗಿದೆ. ತಪ್ಪಿನ ಅರಿವಾಗುತ್ತಿದ್ದಂತೆಯೇ ಪರೀಕ್ಷೆಯನ್ನು ರದ್ದುಪಡಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ದಾವಣಗೆರೆ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಮಂಗಳವಾರ ಬಿಕಾಂ ಅಂತಿಮ ವರ್ಷದ ಇ-ಕಾಮರ್ಸ್ (ಅಂತಿಮ ವರ್ಷದ ಎಲೆಕ್ಟಿವ್ ಪೇಪರ್) ವಿಷಯದ ಪರೀಕ್ಷೆ ನಡೆಯುತ್ತಿತ್ತು. ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಕುಳಿತಾಗ ಅವರ ಕೈಗೆ ಪ್ರಶ್ನೆ ಪತ್ರಿಕೆ ನೀಡಲಾಯಿತು. ಆದರೆ, ಪ್ರಶ್ನೆಗಳೊಂದಿಗೆ ಉತ್ತರವೂ ಮುದ್ರಣವಾಗಿರುವುದು ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ಬಂದಿದೆ.

ಕೂಡಲೇ ಎಲ್ಲ ವಿದ್ಯಾರ್ಥಿಗಳಿಂದ ಪತ್ರಿಕೆ ವಾಪಸ್ ಪಡೆದು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಕರೆ ಮಾಡಿ, ಪರೀಕ್ಷೆ ತಡೆಯುವಂತೆ ಸೂಚನೆ ನೀಡಲಾಯಿತು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆ ಒಳಗೊಂಡಿರುವ ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದು, ಈ ಪೈಕಿ ಮಂಗಳವಾರ 15 ಪರೀಕ್ಷಾ ಕೇಂದ್ರಗಳಲ್ಲಿ ಉತ್ತರವಿದ್ದ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಸೆಟ್ ಮಾಡಿದ ಪ್ರಶ್ನೆಪತ್ರಿಕೆಗಳನ್ನು ಪ್ರಿಂಟ್ ಮಾಡುವಾಗ ಗೊಂದಲವಾಗಿದೆ ಎನ್ನಲಾಗಿದೆ. ಅಸಲಿಗೆ ಸ್ಕೀಮ್ ಆಫ್ ವ್ಯಾಲ್ಯುವೇಷನ್(ಮೌಲ್ಯಮಾಪನಾ ಸೂಚಿ) ಅನ್ನು ಪ್ರಿಂಟ್ ಮಾಡಿಸುವುದಿಲ್ಲ. ಆದರೆ, ಇಲ್ಲಿ ಪ್ರಶ್ನೆ ಪತ್ರಿಕೆ ಸೆಟ್ ಮಾಡಿದವರು ಬರೆದುಕೊಟ್ಟ ಸ್ಕೀಮ್ ಆಫ್ ವ್ಯಾಲ್ಯುವೇಷನ್ ಅನ್ನೂ ಪ್ರಶ್ನೆ ಪತ್ರಿಕೆ ಜೊತೆ ಮುದ್ರಣಕ್ಕೆ ಕೊಟ್ಟಿರುವುದೇ ಎಡವಟ್ಟಿಗೆ ಕಾರಣ ಎಂದು ಉಪನ್ಯಾಸಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News