ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ವಿಜಯೇಂದ್ರ ಆಗ್ರಹ

Update: 2024-01-01 10:43 GMT

ದಾವಣಗೆರೆ, ಜ.1: ರಾಜ್ಯದ ಕಾಂಗ್ರೆಸ್ ಸರಕಾರವು ಚುನಾವಣೆ ರಾಜಕಾರಣವನ್ನು ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಬೇಕು. ತಕ್ಷಣ ಪರಿಹಾರ ಘೋಷಿಸಿ, ರೈತರಿಗೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಇಂದು ದಾವಣಗೆರೆ ತಾಲೂಕಿನ ಆನಗೋಡು ಮತ್ತು ಅಣಜಿ ಮಧ್ಯದಲ್ಲಿರುವ ಜಮಾಪುರ ಗ್ರಾಮದಲ್ಲಿ ಬರಗಾಲ ಪರಿಸ್ಥಿತಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ರೈತರ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರಕಾರ ಎಚ್ಚತ್ತುಕೊಂಡು ರೈತರಿಗೆ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡಿದರು.

ರಾಜ್ಯ ಕಾಂಗ್ರೆಸ್ ಸರಕಾರವು ಬರಗಾಲ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದರೆ ಸಾಲದು. ಅದು ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳಂತೆ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ತಕ್ಷಣವೇ ರೈತರನ್ನು ತಲುಪುವಂತಾಗಬೇಕು ಎಂದು ತಿಳಿಸಿದರು.

ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಡಿಬಿಟಿ ಮೂಲಕ ಕೋಟ್ಯಂತರ ರೈತರಿಗೆ 6 ಸಾವಿರ ರೂ. ಜಮಾ ಮಾಡುತ್ತಾರೆ. ಯಡಿಯೂರಪ್ಪ 4 ಸಾವಿರ ಕೊಡುತ್ತಿದ್ದರು. ಆದರೆ, ಅದನ್ನು ಸಿದ್ದರಾಮಯ್ಯ ಸರಕಾರ ಬಂದ್ ಮಾಡಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.

ಕೇಂದ್ರ ಸರಕಾರದ ಯೋಜನೆಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ತಲುಪುತ್ತಿದೆ. ರಾಜ್ಯ ಸರಕಾರ ಜಾಹೀರಾತು ಕೊಟ್ಟು ಪ್ರಚಾರ ಪಡೆಯುವ ಬದಲಾಗಿ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಲ್ಲಿದೆ. ಇವತ್ತು ಪ್ರತಾಪ್ ಸಿಂಹ ಅವರ ತಮ್ಮನ ವಿಚಾರದಲ್ಲಿ ಇದೊಂದು ರಾಜಕೀಯ ಪ್ರೇರಿತ ಕ್ರಮವೆಂದು ಎಂಥ ಅನಕ್ಷರಸ್ಥರೂ ಹೇಳುತ್ತಾರೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ನೀವೆಲ್ಲ ಗಮನಿಸಿದ್ದೀರಿ. ಕಾಂಗ್ರೆಸ್ ಸರಕಾರವು ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಅವರು ವಿಕ್ರಂ ಸಿಂಹ ಬಂಧನ ಕುರಿತ ಪ್ರಶ್ನೆಗೆ ಆರೋಪಿಸಿದರು.

ಹೊಸ ವರ್ಷದಲ್ಲಿ ನಮ್ಮೆಲ್ಲ ಮುಖಂಡರ ಜೊತೆ ಬೂಟಾಟಿಕೆ ಮಾಡಲು ಬರಗಾಲ ವೀಕ್ಷಣೆಗೆ ಬಂದಿಲ್ಲ. ಇವತ್ತಿನ ಭೇಟಿ ಮೂಲಕ ರಾಜ್ಯ ಸರಕಾರವನ್ನು ಎಚ್ಚರಿಸಬೇಕು. ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವುದೇ ಮುಖ್ಯಮಂತ್ರಿಯಆದ್ಯತೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.

ರೈತಾಪಿ ವರ್ಗದಲ್ಲಿ ಎಲ್ಲ ಸಮಾಜ, ಎಲ್ಲ ವರ್ಗ, ಎಲ್ಲ ಧರ್ಮದವರೂ ಇರುತ್ತಾರೆ. ರೈತರೆಂದರೆ ಕೇವಲ ಹಿಂದೂಗಳು, ಲಿಂಗಾಯತರಲ್ಲ. ಇವತ್ತು ದಲಿತ ರೈತ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ರಾಜ್ಯವು ಹೊಸ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಾಜ್ಯದ ರೈತರೇ ತಮ್ಮ ಆದ್ಯತೆ ಆಗಿರಲಿ ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ರೈತರಿಗೆ ಸ್ಪಂದಿಸಿ. ನೀವು ಅಲ್ಪಸಂಖ್ಯಾತರಿಗೆ ಸಾವಿರ ಕೋಟಿ ರೂ., 10 ಸಾವಿರ ಕೋಟಿ ರೂ. ಘೋಷಿಸುವಾಗ ಕೇಂದ್ರವನ್ನು ಕೇಳುತ್ತಿಲ್ಲ. ರೈತರ ವಿಷಯ ಬಂದಾಗ ನರೇಂದ್ರ ಮೋದಿ, ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತೀರಿ ಎಂದು ಮುಖ್ಯಮಂತ್ರಿಯವರ ಕ್ರಮಕ್ಕೆ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಂಸದ ಜಿಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News