ದಾವಣಗೆರೆ| ರಾಮ ಮಂದಿರ ಉದ್ಘಾಟನೆ ಹಿನ್ನೆಲೆ: ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ದಾವಣಗೆರೆ: ಆಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾದ್ಯಂತ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಮುಖಂಡರುಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಶಾಂತಿ ಮತ್ತು ಸೌಹಾರ್ಧತೆಗೆ ಯಾವುದೇ ಧಕ್ಕೆ ಬಾರದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಹಲವು ಸೂಚನೆ ನೀಡಲಾಗಿದೆ.
ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಚೋಧನಕಾರಿ ಹಾಡು, ಘೋಷಣೆ, ಪೋಸ್ಟರ್ ನಿಷೇಧಿಸಲಾಗಿದೆ. ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಬಾರದು. ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಆಚರಿಸಬೇಕು.
ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪೋಸ್ಟ್‌ಗಳನ್ನು ಹಾಕುವುದಾಗಲೀ ಹಾಗು ಶೇರ್ ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು. ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಆಚರಿಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಣಿ 112 ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.