ಸಂಸದ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ : ಮಾಜಿ ಸಚಿವ ಎಸ್.ಎ ರವೀಂದ್ರನಾಥ್
ದಾವಣಗೆರೆ : ಸಂಸದ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಹೇಳಿದರು.
ನಗರದಲ್ಲಿ ಬಿಜೆಪಿ ಬಂಡಾಯ ನಾಯಕರು ಸಭೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಿಸೋದು ನಮ್ಮ ಗುರಿಯಾಗಿದೆ. ಬಿಜೆಪಿ ಸೋಲಬಾರದು ಎಂದರೆ ಪಕ್ಷದಲ್ಲಿ ಬೇರೆಯವರಿಗೆ ಟಿಕೆಟ್ ನೀಡಬೇಕು. ನಾವು ಬಿಎಸ್ ವೈ ಸೇರಿದಂತೆ ಯಾರ ಬಳಿಯೂ ಹೋಗಲ್ಲ. ದುಗ್ಗಮ್ಮನ ಜಾತ್ರೆ ಬಳಿಕ ಅಭ್ಯರ್ಥಿ ಬದಲಿಸಬೇಕು. ಇಲ್ಲದಿದ್ದರೆ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿದ್ದೇಶ್ವರ್ ಅವರ ಕುಟುಂಬದವರು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸಲಾಗುವುದು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ ಮನುಷ್ಯ ಜಿ.ಎಂ ಸಿದ್ದೇಶ್ವರ್. ಹೀಗಾಗಿ ನಾವು ಯಾರು ಸಿದ್ದೇಶ್ವರ್ ಗೆ ಬೆಂಬಲ ಕೋಡೊ ಪ್ರಶ್ನೆ ಇಲ್ಲ. ಇಷ್ಟು ದಿನ ಅವರಿಗೆ ಗೌರವ ಕೊಟ್ಟಿದ್ದೇವೆ. ಮತ್ತೆ ಗೌರವ ಕೊಡುವ ಪ್ರಶ್ನೆ ಇಲ್ಲ, ಬದಲಾವಣೆ ಒಂದೇ ನಮ್ಮ ಬೇಡಿಕೆ ಎಂದು ಹೇಳಿದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಕಟ್ಟಿ ಬೆಳೆಸಿದವರು ನಾವೇ ಎಂದು ಸಂಸದರು ಹೇಳುತ್ತಿದ್ದಾರೆ. ಹಾಗಾದರೆ ಕಳೆದ ಬಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ವಿಧಾನಸಭೆಗಳಲ್ಲಿ ಬಿಜೆಪಿ ಸೋಲಲು ಅವರೇ ಕಾರಣವೇ? ಈ ನೈತಿಕ ಹೊಣೆ ಹೊತ್ತುಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ಮಹಿಳೆಯೊಬ್ಬರಿಗೆ ಈ ಬಾರಿ ಟಿಕೆಟ್ ನೀಡಬೇಕು ಎನ್ನುವುದಾದರೆ, ಸಾಮಾನ್ಯ ಕಾರ್ಯಕರ್ತೆಗೆ ನೀಡಲಿ. ಯಾವುದೇ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ನಾವು ತನು, ಮನ, ಧನ ನೀಡಿ ಅವರ ಗೆಲುವಿಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಸವರಾಜ ನಾಯ್ಕ್, ಲೋಕಿಕೆರೆ ನಾಗರಾಜ, ಪಾಲಿಕೆ ಸದಸ್ಯ ಅಜಯ್ ಕುಮಾರ್, ಮಾಡಾಳ ಮಲ್ಲಿಕಾರ್ಜುನ, ಡಾ.ರವಿಕುಮಾರ್ ಸೇರಿದಂತೆ ಇತರರು ಇದ್ದರು.