ತೈಲ ದರ ಹೆಚ್ಚಳ | ರಾಜ್ಯ ಸರಕಾರ ಅಧಿಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ : ಬೊಮ್ಮಾಯಿ

Update: 2024-06-20 09:32 GMT

ದಾವಣಗೆರೆ : ರಾಜ್ಯ ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಓಟು ಪಡೆಯಲು ಬಡವರ, ಸಾಮಾನ್ಯರ ಮೇಲೆ ದರ ಹೆಚ್ಚಳದ ಬರೆ ಎಳೆದಿದ್ದು, ಪೆಟ್ರೋಲ್ ಡಿಸೇಲ್ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿರುವ ಸರಕಾರ ಅಧಿಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಅವರು ಇಂದು ರಾಜ್ಯ ಸರಕಾರದ ವಿರುದ್ಧ ದಾವಣಗೆರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಚೇರಿಯಿಂದ ಎಸಿ ಕಚೇರಿವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು

ʼರಾಜ್ಯ ಸರಕಾರ ಕಳೆದ ಒಂದು ವರ್ಷದಿಂದ ಬಡವರ, ಜನ ಸಾಮಾನ್ಯರ ವಿರೋಧಿ ನಿಲುವನ್ನು ತಳೆದು ಅಧಿಕಾರ ನಡೆಸುತ್ತಿದೆ. ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದೆ. ಈ ಮೂಲಕ ರಾಜ್ಯವನ್ನು ಹತ್ತು ವರ್ಷ ಹಿಂದಕ್ಕೆ ತಳ್ಳಲಾಗಿದೆʼ ಎಂದು ಆರೋಪಿಸಿದರು.

ʼಒಂದು ಲಕ್ಷದ ಐದು ಸಾವಿರ ಕೋಟಿ ರೂ. ಸಾಲದ ಹೊರೆಯನ್ನು ರಾಜ್ಯದ ಜನತೆ ಮೇಲೆ ಹೊರಿಸಿದ್ದಾರೆ. ಮೊದಲು ಮೋಟರ್ ಟ್ಯಾಕ್ಸ್, ಮದ್ಯದ ದರ ಹೆಚ್ಚು ಮಾಡಿ, ಸ್ಟ್ಯಾಂಪ್ ತೆರಿಗೆ ಹೆಚ್ಚಳ ಮಾಡಿದ್ದರು. ಈಗ ಪೆಟ್ರೋಲ್-ಡಿಸೇಲ್ ದರ ಹೆಚ್ಚು ಮಾಡಿದ್ದಾರೆ. ಈ ರಾಜ್ಯ ಸರಕಾರಕ್ಕೆ ರಾಜ್ಯವನ್ನು ಅಳುವ ನೈತಿಕತೆ ಇಲ್ಲʼ ಎಂದು ವಾಗ್ದಾಳಿ ನಡೆಸಿದರು.

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದ್ದು, ಅಭಿವೃದ್ದಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಲೋಕಸಭೆಯಲ್ಲಿ ಹಿನ್ನಡೆ ಆಗಿದ್ದರಿಂದ ಬಡ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News