ʼಇಂಡಿ’ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ : ಪ್ರಧಾನಿ ಮೋದಿ ವ್ಯಂಗ್ಯ
ದಾವಣಗೆರೆ : ʼಇಂಡಿ’ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನೂ ಸಂತೋಷವಾಗಿಡಲು ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
ದಾವಣಗೆರೆಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, "ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಎಸ್‍ಸಿ, ಎಸ್‍ಟಿಗಳಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿ ರೂ. ಹಣವನ್ನು ಬೇರೆಡೆ ವರ್ಗಾಯಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ಬಿಜೆಪಿ ಸರಕಾರ 4 ಸಾವಿರ ಕೊಡುತ್ತಿತ್ತು. ಆ 4 ಸಾವಿರ ರೂ. ಕೊಡುವುದನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿತು. ಈಗ ಕೇವಲ 6 ಸಾವಿರ ಮಾತ್ರ ಸಿಗುತ್ತಿದೆ. ಕಾಂಗ್ರೆಸ್ ನವರಿಗೆ ರೈತರ ಮೇಲೆ ದ್ವೇಷ ಇದೆಯೇ?. ಒಬಿಸಿ ಮೀಸಲಾತಿಯಡಿ ಅಲ್ಪಸಂಖ್ಯಾತರನ್ನು ತಂದಿದೆ" ಎಂದು ಹೇಳಿದರು.
"ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಕಟ್ಟುವಂತೆ ಸೂಚಿಸುವ ಪ್ರಯತ್ನ ಕಾಂಗ್ರೆಸ್ಸಿನದು. ಮಕ್ಕಳ ಒಳಿತಿಗಾಗಿ ಕೂಡಿಟ್ಟ ಹಣದ ಮೇಲೆ ಶೇ.55 ತೆರಿಗೆ ಕಟ್ಟಲು ಸೂಚಿಸಿ ಡಕಾಯಿತಿ ನಡೆಸಿ, ಅದನ್ನು ಬೇರೆಯವರಿಗೆ ಹಂಚುವ ಪ್ರಯತ್ನ ಇದೆ" ಎಂದು ವಿಶ್ಲೇಷಿಸಿದರು.
ʼಕಾನೂನು- ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆ ಬರಲು ಸಾಧ್ಯವೇ?. ಕರ್ನಾಟಕದ ಕಾನೂನು- ಸುವ್ಯವಸ್ಥೆ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ನಾಗರಿಕರು ಅಸುರಕ್ಷಿತೆಯ ಚಿಂತೆಯಲ್ಲಿದ್ದಾರೆ. ಕೆಫೆಯಲ್ಲಿ ಬಾಂಬ್ ಸ್ಫೋಟವಾದರೆ ಗ್ಯಾಸ್ ಸಿಲಿಂಡರ್ ಸ್ಫೋಟ ಎನ್ನುತ್ತಾರೆ. ಬಳಿಕ ಬಿಸಿನೆಸ್ ಸಂಬಂಧ ವೈಷಮ್ಯ ಎನ್ನುತ್ತಾರೆ. ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿದೆ. ಅದರಲ್ಲೂ ಕಾಂಗ್ರೆಸ್ ವೋಟ್‍ಬ್ಯಾಂಕ್ ಹುಡುಕಿತುʼ ಎಂದು ಟೀಕಿಸಿದರು.
ನೂತನ ಶಿಕ್ಷಣ ನೀತಿಗೆ (ಎನ್‍ಇಪಿ) ಬ್ರೇಕ್ ಹಾಕಲಾಗಿದೆ. ಇದರಿಂದ ಯುವಜನರಿಗೆ ದೊಡ್ಡ ನಷ್ಟ ಉಂಟಾಗಿದೆ. ರಾಜಕೀಯ ಮತಭೇದ ಇರಲಿ, ಆದರೆ ಯುವಜನರ ಭವಿಷ್ಯದ ಮೇಲೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ಪಕ್ಷವು ತಪ್ಪು ಮಾಡುತ್ತಿದೆ. ಗರಿಷ್ಠ ಭ್ರಷ್ಟಾಚಾರ, ಲಕ್ಷಗಟ್ಟಲೆ ಮೊತ್ತದ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇವರ ಮೇಲೆ ಭರವಸೆ ಇಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದರು, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ವೇದಿಕೆಯಲ್ಲಿದ್ದರು