ಬಿಗ್‌ಬಾಸ್‌ ನಿಂದ ಚೈತ್ರಾಳನ್ನು ಕೈಬಿಡುವಂತೆ ಆಗ್ರಹ; ವಾಹಿನಿ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ನೀಡಿದ ವಕೀಲ

Update: 2024-10-02 09:36 GMT

ಚೈತ್ರಾ /ವಕೀಲ ಭೋಜರಾಜ್

ಸಾಗರ: ಬಿಗ್‌ಬಾಸ್ ಸೀಸನ್‌ 11 ರ ಸ್ಪರ್ಧಿಯಾಗಿ ಆಯ್ಕೆಯಾದ ಚೈತ್ರಾಳನ್ನು ಬಿಗ್‌ಬಾಸ್ ಕಾರ್ಯಕ್ರಮದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ವಕೀಲರೊಬ್ಬರು ನೋಟಿಸ್ ಕಳುಹಿಸಿದ್ದಾರೆ.

ಸಾಗರದ ವಕೀಲ ಭೋಜರಾಜ್ ಎಂಬವರು ಕಲರ್ಸ್ ಕನ್ನಡಕ್ಕೆ ಬರೆದಿರುವ ಪತ್ರ ವೈರಲ್ ಆಗಿದೆ. ಚೈತ್ರಾಳನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರಗಿಸುವುದಾಗಿ ವಕೀಲರು ಸೂಚಿಸಿದ್ದಾರೆ.

ಚೈತ್ರಾ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ಹಾಗೂ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಚೈತ್ರಾಳ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ನನಗೆ ಆಕೆಯೊಂದಿಗೆ ವೈಯಕ್ತಿಕವಾಗಿ ಯಾವುದೇ ವೈಷಮ್ಯವಿಲ್ಲ. ಆದರೆ ಆಕೆಯನ್ನು ಸ್ಪರ್ಧಿಯಾಗಿ ಮುಂದುವರೆಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಈ ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಕಳಿಸುವಂತೆ ನೋಟಿಸ್‌ನಲ್ಲಿ ಆಗ್ರಹಿಸಿದ್ದಾರೆ.

17 ಜನ ಸ್ಪರ್ಧಿಗಳ ಪೈಕಿ, ಅಪರಾಧ ಹಿನ್ನೆಲೆಯುಳ್ಳ ಚೈತ್ರಾ ಕೂಡಾ ಸಹ ಸ್ಪರ್ಧಿಯಾಗಿ ಘೋಷಣೆ ಮಾಡಿರುವುದು ಕನ್ನಡದ ಕೋಟ್ಯಾಂತರ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಆಘಾತವುಂಟಾಗಿದೆ. ಅತ್ಯಂತ ಜನಪ್ರಿಯ ಕಾರ್ಯಕ್ರಮ  ಬಿಗ್‌ಬಾಸ್ ನಲ್ಲಿ ನಟ ಸುದೀಪ್ ಅವರು ಚೈತ್ರಾಳನ್ನು "ಹಿಂದೂ fire brand" ಎಂದು ಹೊಗಳಿದ್ದಾರೆ. ಮಾತ್ರವಲ್ಲ‌, ಈಗಾಗಲೇ ಚೈತ್ರಾಳ  ವಿರುದ್ಧ ಸುಮಾರು 11 ಕೇಸ್ ಗಳು ದಾಖಲಾಗಿವೆ. 'ಹಿಂದಿನ ಸೀಸನ್ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದುಕೊಂಡು ಬಿಗ್‌ಬಾಸ್ ವೀಕ್ಷಣೆ ಮಾಡಿದ್ದೇನೆ' ಎಂದು ಚೈತ್ರಾ ಹೇಳಿರುವುದು ಪ್ರೇಕ್ಷಕರಲ್ಲಿ ಮುಜುಗರವುಂಟುಮಾಡಿದೆ ಎಂದು ಎಂದು ತಿಳಿಸಿದ್ದಾರೆ.

ಈ ಹಿಂದೆ ವಂಚನೆ ಕೇಸ್‌ಗೆ ಒಳಗಾಗಿರುವ ಚೈತ್ರಾಳ ಹೆಸರಿನ ಮುಂದೆ 'ಕುಂದಾಪುರ' ಎಂಬ ಹೆಸರನ್ನು ಬಳಸಬಾರದು, ಬಳಸಿದ್ದಲ್ಲಿ, ಕುಂದಾಪುರದ ಜನತೆಗೆ ಅವಮರ್ಯಾದೆ ಆಗುತ್ತದೆ. ರಾಜ್ಯದ ಜನರು, ಕುಂದಾಪುರದ ಜನರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ ಎಂಬ ವಿಚಾರವನ್ನು ಇಟ್ಟುಕೊಂಡು ಸ್ಥಳೀಯರು, ಚೈತ್ರಾ ಬಳಸುತ್ತಿದ್ದ 'ಕುಂದಾಪುರ' ಎಂಬ ಹೆಸರನ್ನು ತೆಗೆದು ಹಾಕುವಂತೆ ಪ್ರತಿಭಟನೆ ಮಾಡಿದ್ದರು. ಹೀಗಿದ್ದೂ ಸಹ ಚಾನೆಲ್‌, ತಮ್ಮ ಟಿಆರ್‌ಪಿ ಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು, ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಈ ನೋಟಿಸ್ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ ಬಿಗ್‌ಬಾಸ್ ಸೀಸನ್ 11 ರ ಪ್ರತಿಸ್ಪರ್ಧಿಯಾದ ಸ್ವಯಂ ಘೋಷಿತ "ಹಿಂದೂ fire brand" ಎಂಬ ಹೆಸರನ್ನು ಇಟ್ಟುಕೊಂಡು, ಎಫ್‌ಐಆರ್ ಮತ್ತು ಕ್ರಿಮಿನಲ್‌ ಪ್ರಕರಣ ಹೊಂದಿರುವ, ಚೈತ್ರಾಳನ್ನು ಈ ನೋಟಿಸ್ ನ ಪ್ರತಿಯ ಇಮೇಲ್ ತಲುಪಿದ ತಕ್ಷಣವೇ ಸ್ಪರ್ಧೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಇದರಿಂದ ಮುಂದೆ ಆಗುವ ಎಲ್ಲಾ ಆಗು ಹೋಗುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News