ಪ್ರಹ್ಲಾದ್ ಜೋಶಿಯವರೇ, ನಿಮಗೇಕೆ ಮತ ಹಾಕಬೇಕು? : ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತೆಯದ್ದೆನ್ನಲಾದ ಆಡಿಯೊ ವೈರಲ್

Update: 2024-04-07 13:54 GMT

ಪ್ರಧಾನಿ ಮೋದಿಯವರಿಂದ 2016ನೇ ಸಾಲಿನ ಶೌರ್ಯ ಪ್ರಶಸ್ತಿ ಸ್ವೀಕರಿಸುತ್ತಿರುವ ಸಿಯಾ ವಾಮನಸಾ ಖೋಡೆ

ಹುಬ್ಬಳ್ಳಿ : "ಜೋಶಿಗೆ ಏಕೆ ಮತ ಹಾಕಬೇಕು?" ಎಂದು ಪ್ರಶ್ನಿಸಿರುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತ ಯುವತಿಯದ್ದೆನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸಮರ ಸಾರಿರುವುದರ ಬೆನ್ನಲ್ಲೇ ಮೊದಲ ಬಾರಿ ಮತಚಲಾಯಿಸಲಿರುವ ಯುವತಿಯೋರ್ವಳು ಪ್ರಶ್ನಿಸುತ್ತಿರುವ ಆಡಿಯೋ ಮುಜುಗರ ತಂದಿದೆ ಎನ್ನಲಾಗಿದೆ.

ಈ ಆಡಿಯೋ ಕ್ಲಿಪ್ 2016ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಹುಬ್ಬಳ್ಳಿಯ ದಾಜೀಬಾನ್ ಪೇಟೆ ನಿವಾಸಿ ಸಿಯಾ ವಾಮನಸಾ ಖೋಡೆಯವರದ್ದು ಎನ್ನಲಾಗಿದೆ. ಈ ಬಾರಿ ಮೊದಲ ಮತ ಚಲಾಯಿಸಲಿರುವ ಸಿಯಾ ವಾಮನಸಾ ಖೋಡೆ, “ತಾನು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದರೂ ತನ್ನನ್ನು ಗುರುತಿಸಿ, ಪ್ರೋತ್ಸಾಹಿಸದ ಹಾಲಿ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಏಕೆ ಮತ ಹಾಕಬೇಕು?” ಎಂದು ಪ್ರಶ್ನಿಸಿದ್ದಾರೆ.

'ನನಗೆ ಈ ವರ್ಷ ಮತದಾನದ ಹಕ್ಕು ಲಭಿಸಿದೆ. ನನ್ನ ಮತವನ್ನು ನಿಮಗೆ ಏಕೆ ಹಾಕಬೇಕೆಂದು ಹೇಳಿ' ಎಂದು ಪ್ರಶ್ನಿಸಿರುವ ಸಿಯಾ ವಾಮನಸಾ, ಅದಕ್ಕೆ ಕಾರಣವನ್ನು ವಿವರಿಸುತ್ತಾ, 'ನನಗೆ ಶೌರ್ಯ ಪ್ರಶಸ್ತಿ ಬಂದು ಏಳು ವರ್ಷಗಳೇ ಕಳೆದಿವೆ. ನೀವು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯವಳಾದ ನನಗೆ ಸಹಾಯ, ಸನ್ಮಾನ ಏನು ಮಾಡುವುದು ಬಿಡಿ, ಸೌಜನ್ಯಕಾದರೂ ನನ್ನನ್ನ ಕರೆದು ನೀವು ಮಾತನಾಡಿಸಿಲ್ಲ. ಬೇರೆ ಬೇರೆ ರಾಜ್ಯದ ಸಂಸದರು ತಮ್ಮ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರನ್ನು ಕರೆಸಿ ಸಹಾಯ, ಸನ್ಮಾನ ಮಾಡಿದ್ದಾರೆ. ನಿಮ್ಮದೇ ಕ್ಷೇತ್ರದವಳಾದ ನನಗೆ ನೀವು ಏನೂ ಮಾಡಿದ್ದೀರಿ? ಇಷ್ಟು ದೊಡ್ಡ ಪ್ರಶಸ್ತಿಗೆ ಭಾಜನಳಾದ ನನಗೆ ನೀವೇಕೆ ಹೀಗೆ ಮಾಡಿದ್ರಿ?ʼ ಎಂದು ಪ್ರಶ್ನಿಸಿರುವುದು ವೈರಲ್ ಆಡಿಯೋದಲ್ಲಿದೆ.

ಪ್ರಶಸ್ತಿ ಬಂದಾಗ ನನ್ನ ತಂದೆ-ತಾಯಿ ನನ್ನನ್ನು ನಿಮ್ಮ ಬಳಿ ಕರೆದುಕೊಂಡು ಬಂದು ನಿಮಗೇ ಮೊದಲು ಪ್ರಶಸ್ತಿಯ ವಿಷಯ ತಿಳಿಸಿದ್ದರು. ಆದರೆ ನೀವು ನನ್ನನ್ನು ನಿರ್ಲಕ್ಷ್ಯ ಮಾಡಿದ್ದೀರಿ ಎಂದು ಅಸಮಾಧಾನ ತೋಡಿಕೊಂಡಿದ್ದಾರುವುದು ಆಡಿಯೋದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News