ಹುಬ್ಬಳ್ಳಿ | ಸಭೆಗೆ ಅನುಮತಿ ನೀಡದಿದ್ದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರ ಪ್ರತಿಭಟನೆ
ಹುಬ್ಬಳ್ಳಿ : ರಂಭಾಪೂರಿ ಮಠದಲ್ಲಿ ಹಮ್ಮಿಕೊಂಡಿದ್ದ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆಗೆ ಚುನಾವಣಾ ಆಯೋಗ ಅನುಮತಿ ನೀರಾಕರಿಸಿದ್ದು, ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸ್ವಾಮೀಜಿಗಳು, ಚುನಾವಣಾ ಅಧಿಕಾರಿ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಪೊಲೀಸ್ ಮತ್ತು ಮಠಾಧೀಶರ ನಡುವೆ ಸುಮಾರು ಅರ್ಧಗಂಟೆ ಚರ್ಚೆ ನಡೆಯಿತು. ತಕ್ಷಣ ಅನುಮತಿ ನೀಡಬೇಕು. ಯಾಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದರು.
ಬಳಿಕ ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಅನುಮತಿ ಪತ್ರದಲ್ಲಿ ರಾಜಕೀಯ ಸಭೆ ಎಂದು ಬರೆದ ಕಾರಣ ಅನುಮತಿ ನೀಡಿಲ್ಲ. ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶವೂ ಇಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯೇತರ ಸಭೆ ನಡೆಸಲು ಈಗ ಅನುಮತಿ ನೀಡಿದ್ದೇವೆ ಎಂದು ತಿಳಿಸಿದರು.
ಇದರಿಂದ ಅಸಮಾಧಾನಿತರಾದ ಸ್ವಾಮೀಜಿಗಳು, ಮಠಾಧೀಶರನ್ನು ಬೀದಿಗಿಳಿಸಿದ ಇನ್‌ಸ್ಪೆಕ್ಟರ್ ಅವರು ನಮ್ಮ ಬಳಿ ಕ್ಷಮೆ ಕೇಳಬೇಕು. ಇಲ್ಲಿದ್ದರೆ ಮತ್ತೆ ಪ್ರತಿಭಟನೆ ನಡೆಸುತ್ತೇವೆಎಂದು ಪಟ್ಟು ಹಿಡಿದರು . ನಂತರ ಡಿಸಿಪಿ ರಾಜೀವ್ ಎಂ. 'ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇವೆ. ರಾಜಕೀಯ ಹೊರತುಪಡಿಸಿ ಸಭೆ ನಡೆಸಿ' ಎಂದರು. ಬಳಿಕ ಎಲ್ಲಾ ಮಠಾಧೀಶರು ಪ್ರತಿಭಟನೆಯನ್ನು ಹಿಂಪಡೆದರು.
ಅನುಮತಿ ನೀಡದ ಕಾರಣ ನಾವು ಸಭೆ ನಡೆಸಲು ತೀರ್ಮಾನಿಸಿದೆವು ; ದಿಂಗಾಲೇಶ್ವರ ಸ್ವಾಮೀಜಿ
ನಾವು ಸಾಧು ಸಂತರ ಸಭೆ ನಡೆಸಲು ಅನುಮತಿ ನೀಡಬೇಕೆಂದು ಶುಕ್ರವಾರವೇ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಆದರೆ ಚುನಾವಣಾ ಆಯೋಗವು ಶನಿವಾರ ಬೆಳಿಗ್ಗೆ 11.30 ಆದರೂ ಅನುಮತಿ ನೀಡದ ಕಾರಣ ನಾವು ಸಭೆ ನಡೆಸಲು ತೀರ್ಮಾನಿಸಿದೆವು. ಆಗ ಪೊಲೀಸರು ಮತ್ತು ಅಧಿಕಾರಿಗಳು ನಮ್ಮನ್ನು ಸಭೆ ನಡೆಸದಂತೆ ತಡೆದರು ಎಂದು ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.