ಚಿಕ್ಕಮಗಳೂರು| ಕಾಡಾನೆ ದಾಳಿಗೆ ಆನೆ ಕಾರ್ಯಪಡೆ ಸಿಬ್ಬಂದಿ ಬಲಿ

Update: 2023-11-22 13:43 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ಹಾವಳಿಗೆ ಕೊನೆ ಇಲ್ಲದಂತಾಗಿದ್ದು, ಇತ್ತೀಚೆಗೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಾಸುವುದಕ್ಕೂ ಮುನ್ನ ಬುಧವಾರ ಸಂಜೆ ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆಯ ಸಿಬ್ಬಂದಿ ಬಲಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ. ಘಟನೆಯನ್ನು ಮತ್ತಿಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಗೌಡಳ್ಳಿ ನಿವಾಸಿಯಾಗಿರುವ ಕಾರ್ತಿಕ್‍ಗೌಡ(26) ಮೃತ ಆನೆ ಕಾರ್ಯಪಡೆ ಸಿಬ್ಬಂದಿಯಾಗಿದ್ದು, ಬುಧವಾರ ಸಂಜೆ ಭೈರಾಪುರ ಗ್ರಾಮಕ್ಕೆ ದಾಳಿ ಇಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುತ್ತಿದ್ದ ಸಂದರ್ಭದಲ್ಲಿ ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ್ದು, ದಾಳಿಯಲ್ಲಿ ಕಾರ್ತಿಕ್‍ಗೌಡ ಅವರನ್ನು ಕಾಡಾನೆ ತುಳಿದು ಸಾಯಿಸಿದ್ದು, ಘಟನೆಯಲ್ಲಿ ಮತ್ತಿಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಹೆಡದಾಳು ಗ್ರಾಮದಲ್ಲಿ ಕೆಲಸಕ್ಕೆ ಹೊರಟಿದ್ದ ಕಾರ್ಮಿಕ ಮಹಿಳೆ ವೀಣಾ ಎಂಬವರ ಮೇಲೆ ದಾಳಿ ನಡೆಸಿದ ಒಂಟಿ ಸಲಗ ಆಕೆಯನ್ನು ತುಳಿದು ಸಾಯಿಸಿತ್ತು. ಈ ಘಟನೆಗೂ ಕೆಲವು ದಿನಗಳ ಹಿಂದೆ ಆಲ್ದೂರು ಸಮೀಪದ ಕಂಚಿಕಲ್ಲು ದುರ್ಗ ಎಂಬಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಕಾರ್ಮಿಕ ಚಿನ್ನಿ ಎಂಬವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಈ ಘಟನೆಗಳ ಜನ  ಮಾಸುವ ಮುನ್ನವೇ ಬುಧವಾರ ಆನೆ ನಿಗ್ರಹ ದಳದ ಸಿಬ್ಬಂದಿಯೇ ಕಾಡಾನೆಗೆ ಬಲಿಯಾಗಿರುವ ಘಟನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆಲ್ದೂರು ಭಾಗದಲ್ಲಿ ಕಾರ್ಮಿಕ ಮಹಿಳೆಯನ್ನು ಸಾಯಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳ ತಂಡ 9 ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಮಹಿಳೆಯನ್ನು ಬಲಿ ಪಡೆದ ಒಂಟಿ ಸಲಗದ ಬಗ್ಗೆ ಇದುವರೆಗೂ ಅರಣ್ಯಾಧಿಕಾರಿಗಳಿಗೆ ಸುಳಿವು ಸಿಕ್ಕಿಲ್ಲ. ಈ ಆನೆಯ ಸೆರೆಗೆ ಕಾರ್ಯಾಚರಣೆ ನಡೆಯುತ್ತಿರುವ ಮಧ್ಯೆಯೇ ಸರಕಾರ ರಚಿಸಿರುವ ಆನೆ ಕಾರ್ಯ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಾಡಾನೆ ದಾಳಿಗೆ ಬಲಿಯಾಗಿರುವುದು ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News