ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷ ಚೇತನರ ಭಾಗವಹಿಸುವಿಕೆಗೆ ಪ್ರೋತ್ಸಾಹ: ಆಯೋಗ

Update: 2023-12-21 15:01 GMT

ಚುನಾವಣಾ ಆಯೋಗ  Photo: PTI 

ಬೆಂಗಳೂರು: ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷ ಚೇತನರಿಗೆ ಸಮಾನವಾಗಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.

ಈ ಕುರಿತಂತೆ ವಿಶೇಷ ಮಾರ್ಗಸೂಚಿ ಹೊರಡಿಸಿರುವ ಆಯೋಗವು, ವಿಶೇಷ ಚೇತನ ಸಮುದಾಯದ ಬಗ್ಗೆ ರಾಜಕೀಯವಾಗಿ ಒಳಗೊಳ್ಳುವಿಕೆ ಮತ್ತು ಗೌರವವನ್ನು ಉತ್ತೇಜಿಸಲು, ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ವಿಶೇಷಚೇತನ ವ್ಯಕ್ತಿಗಳ ಬಗ್ಗೆ ರಾಜಕೀಯ ಭಾಷಣದಲ್ಲಿ ಅವಹೇಳನಕಾರಿ ಪದಗಳನ್ನು ಬಳಸುವ ಅಥವಾ ಆಕ್ಷೇಪಾರ್ಹ ಭಾಷೆ ಬಳಕೆಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಅರಿವು ಮೂಡಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ವಿಶೇಷ ಚೇತನರಿಗೆ ಧಕ್ಕೆ ತರುವಂತಹ ಭಾಷೆಯನ್ನು ಬಳಸುವಂತಿಲ್ಲ. ಉದಾಹರಣೆಗೆ ಮೂಕ(ಗುಂಗಾ), ರಿಟಾರ್ಡೆಡ್ (ಪಾಗಲ್, ಸಿರ್ಫಿರಾ), ಕುರುಡು (ಅಂಧ, ಕನಾ), ಕಿವುಡ (ಬೆಹ್ರಾ), ಕುಂಟ (ಲಂಗ್ಡಾ, ಲೂಲಾ, ಅಪಹಿಜ್) ಮುಂತಾದ ಪದಗಳ ಬಳಕೆ ಮಾಡುವಂತಿಲ್ಲ. ಅಂಗವಿಕಲರಿಗೆ ನ್ಯಾಯ ಮತ್ತು ಗೌರವವನ್ನು ನೀಡಬೇಕು ಎಂದು ಆಯೋಗವು ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ.

ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ತಮ್ಮ ಬರಹಗಳು, ಲೇಖನಗಳು ಸೇರಿದಂತೆ ಪ್ರಚಾರದ ಸಂದರ್ಭಗಳಲ್ಲಿ ಅಥವಾ ರಾಜಕೀಯ ಪ್ರಚಾರದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ, ಭಾಷಣದ ಸಮಯದಲ್ಲಿ ವಿಶೇಷ ಚೇತನರ ಅಂಗವೈಕಲ್ಯ ಅಥವಾ ಅಂಗವಿಕಲತೆಯನ್ನು ಆಡಿಕೊಳ್ಳುವ, ಅವಹೇಳನಕಾರಿ, ಅವಮಾನಕರ ಪದಗಳನ್ನು ಬಳಸಬಾರದು ಎಂದು ಆಯೋಗ ಹೇಳಿದೆ.

ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ವಿಶೇಷ ಚೇತನರ ಅಂಗವಿಕಲತೆ, ಭಾಷೆ, ಪರಿಭಾಷೆ ಸಂದರ್ಭ, ಅಪಹಾಸ್ಯ, ಅವಹೇಳನಕಾರಿ ಉಲ್ಲೇಖಗಳು ಮತ್ತು ಅವರನ್ನು ಅವಮಾನಿಸುವ ಯಾವುದೇ ರೀತಿಯ ಬಳಕೆಯು 2016ರ ವಿಶೇಷ ಚೇತನರ ಹಕ್ಕುಗಳ ಕಾಯಿದೆಯ ಸೆಕ್ಷನ್ 92ರಡಿ ನಿಬಂಧನೆಗಳಿಗೆ ಒಳಪಡುತ್ತಾರೆ ಎಂದು ಆಯೋಗವು ತಿಳಿಸಿದೆ.

ವಿಶೇಷ ಚೇತನರಿಗಾಗಿ ನೆಲ ಮಹಡಿಯಲ್ಲಿ ಮತದಾನ ಕೇಂದ್ರದ ಸ್ಥಾಪನೆ, ಇವಿಎಂನ ಬ್ಯಾಲೆಟ್ ಯೂನಿಟ್‍ನಲ್ಲಿ ಬ್ರೈಲ್ ಚಿಹ್ನೆಗಳು, ಪ್ರತ್ಯೇಕ ಸರತಿ ಸಾಲುಗಳು, ವೀಲ್‍ಚೇರ್ ಗಳು, ಅವಶ್ಯಕತೆ ಇರುವ ವಿಶೇಷ ಚೇತನರ ಸಹಾಯಕ್ಕಾಗಿ ಜೊತೆಯಲ್ಲಿ ಒಡನಾಡಿಗೆ ಅನುಮತಿ ನೀಡುವುದು. ವಿಶೇಷ ಚೇತನರು ಪ್ರವೇಶಿಸಬಹುದಾದ ವಿಶೇಷ ಶೌಚಾಲಯಗಳು ಸೇರಿದಂತೆ ಮತದಾನದ ಪ್ರಕ್ರಿಯೆಯನ್ನು ವಿವರಿಸುವ ಸಾಕಷ್ಟು ಫಲಕಗಳು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಗವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News