188 ಹೊಸ ಇಂದಿರಾ ಕ್ಯಾಂಟೀನ್‍ಗಳ ಸ್ಥಾಪನೆ: ಸಚಿವ ಸಂಪುಟ ನಿರ್ಧಾರ
ಬೆಂಗಳೂರು, ಆ.19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಬ್ಬನಿಗೆ ಪ್ರತೀ ದಿನದ ಊಟ ಹಾಗೂ ಉಪಾಹಾರದ ಬೆಲೆ 62 ರೂ.ಆಗುತ್ತದೆ. ಈ ಪೈಕಿ 37 ರೂ.ಗಳನ್ನು ಸರಕಾರ ಭರಿಸುತ್ತದೆ. ಸಾರ್ವಜನಿಕರಿಂದ 25 ರೂ.ಗಳನ್ನು ಉಪಾಹಾರ ಹಾಗೂ ಎರಡು ಹೊತ್ತಿನ ಊಟಕ್ಕಾಗಿ ಪಡೆಯಲಾಗುತ್ತದೆ ಎಂದರು.
ಹೊಸದಾಗಿ ಆರಂಭಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಪ್ರದೇಶದ ಸ್ಥಳೀಯ ತಿಂಡಿ, ತಿನಿಸುಗಳನ್ನು ಪೂರೈಸಲಾಗುವುದು. ಈ ಸಂಬಂಧ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ. ಈಗಿರುವ 197 ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಮನೆ ಸೇರಿದಂತೆ ದುರಸ್ತಿ ಕಾರ್ಯಕ್ಕೆ 21.29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು 27 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಗ್ರಾಹಕರಿಗೆ ಹಳೆಯ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ.- ಮುಖ್ಯಮಂತ್ರಿ… pic.twitter.com/NdSSfCYDd3
— CM of Karnataka (@CMofKarnataka) August 19, 2023